ಬೆಂಗಳೂರು, ನ 17 (DaijiworldNews/MS): ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ರಾಜಕೀಯ ಮತ್ತೆ ಭುಗಿಲೆದ್ದಿದ್ದು, ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದ ಘಟನೆ ನಡೆದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿದೆ. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲ ಕಾರ್ಯಕರ್ತರು ಡಿಕೆಶಿ, ಮತ್ತು ಜಮೀರ್ ಹೆಸರು ಹೇಳಿ ಘೋಷಣೆ ಕೂಗಿದ್ದಾರೆ. ಇದರಿಂದ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಯಾಗಿದೆ. ಇದರಿಂದ ಸಿಟ್ಟಾದ ಸಿದ್ದರಾಮಯ್ಯ , ಯಾರೂ ಕೂಡಾ ಯಾವುದೇ ರೀತಿ ಘೋಷಣೆ ಕೂಗುವಂತಿಲ್ಲ ಸುಮ್ಮನೆ ಕುಳಿತುಕೊಳ್ಳಿ ಎಂದು ಸೂಚಿಸಿದರು. ಅದರೂ ಸುಮ್ಮನಾಗದ ಕಾರ್ಯಕರ್ತರು ಘೋಷಣೆ ಕೂಗುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ.
ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ನೀವು ಕಾಂಗ್ರೆಸ್ ದ್ರೋಹಿಗಳೆಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ
ಓಟ್ಟಾರೆ ಕಾಂಗ್ರೆಸ್ ನ ಬಣ ರಾಜಕೀಯ ವೇದಿಕೆಯ ಮೇಲೆ ಬಹಿರಂಗವಾದಂತಿದೆ.