ನವದೆಹಲಿ, ನ.17 (DaijiworldNews/PY): ದೆಹಲಿ ಹಾಗೂ ಮುಂಬೈ ನಡುವಿನ ಇಂಡಿಗೊ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೋರ್ವರನ್ನು ವೈದ್ಯರೂ ಆಗಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ ಅವರು ಚಿಕಿತ್ಸೆ ನೀಡಿದ್ದು, ಇವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರಕ್ತದೊತ್ತಡದಲ್ಲಿನ ಏರುಪೇರಿನ ಕಾರಣಗಳಿಂದ ತಲೆಸುತ್ತು ಬಂದು ಬಿದ್ದಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ.ಭಾಗವತ್ ಕರಾಡ್ ಅವರು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದ್ದಾರೆ. ಡಾ.ಭಾಗವತ್ ಕರಾಡ್ ಅವರು ಮಕ್ಕಳ ತಜ್ಞರಾಗಿದ್ದಾರೆ.
"ರಕ್ತದೊತ್ತಡ ಕುಸಿದ ಕಾರಣ ಅವರಿಗೆ ತಲೆಸುತ್ತು ಬಂದು ಬೆವರುತ್ತಿದ್ದರು. ಅವರು ಧರಿಸಿದ್ದ ಬಟ್ಟೆಯನ್ನು ಸಡಿಲಗೊಳಿಸಿ, ಎದೆಯ ಭಾಗವನ್ನು ಉಜ್ಜಿ ಹಾಗೂ ಅವರ ಕಾಲುಗಳನ್ನು ಮೇಲಕ್ಕೆ ಎತ್ತುವಂತೆ ಮಾಡಿದ ನಂತರ ಗ್ಲೂಕೋಸ್ ನೀಡಲಾಯಿತು. 30 ನಿಮಿಷಗಳ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂತು" ಎಂದು ಭಾಗವತ್ ಕೃಷ್ಣರಾವ್ ಕರಾಡ್ ಅವರು ತಿಳಿಸಿದ್ದಾಗಿ ವರದಿಯಾಗಿದೆ.
ಭಾಗವತ್ ಕೃಷ್ಣರಾವ್ ಕರಾಡ್ ಅವರ ಕಾರ್ಯವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಹೃದಯಾಳದಿಂದ ಸದಾ ಒಬ್ಬ ವೈದ್ಯರೇ! ನನ್ನ ಸಹವರ್ತಿಯಿಂದ ಉತ್ತಮ ಕಾರ್ಯವಾಗಿದೆ" ಎಂದಿದ್ದಾರೆ.