ಬೆಂಗಳೂರು, ನ 16 (DaijiworldNews/MS): ಬಿಟ್ಕಾಯಿನ್ ವಿಚಾರವಾಗಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಮತ್ತೊಂದು ಗಂಭೀರ ಆರೋಪ ಮಾಡಿದೆ . ರಾಜ್ಯದಲ್ಲಿ ಬಹುದೊಡ್ದದಾಗಿ ಸುದ್ದಿಯಾಗುತ್ತಿರುವ ಬಿಟ್ಕಾಯಿನ್ ಹಗರಣ ಸಂಬಂಧ ಪ್ರಕರಣದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಎನ್ಕೌಂಟರ್ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ, "ಉತ್ತರ ಪ್ರದೇಶದ ಅಪರಾಧಗಳಲ್ಲಿಯ ತನ್ನ ಪಾತ್ರ ಬಹಿರಂಗವಾಗದಂತೆ ಬಿಜೆಪಿ ಸರ್ಕಾರ ಪೊಲೀಸ್ ಎನ್ಕೌಂಟರ್ ಮುಖೇನ ಆರೋಪಿ ವಿಕಾಸ ದುಬೆಯ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ Bitcoin_Scandal ನ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಪೊಲೀಸ್ ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿಂಡೆ ಬಿಟ್ಕಾಯಿನ್ ಪ್ರಕರಣ ತಂತ್ರಜ್ಞಾನ ಅವಲಂಬಿಸಿರುವ 'ಬೈಟ್ ಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯವಿದೆ ಎಂದು ಸಿದ್ದರಾಮಯ್ಯ ಅವರೂ ಆತಂಕ ವ್ಯಕ್ತಪಡಿಸಿದ್ದರು.