ಬೆಂಗಳೂರು, ನ 16 (DaijiworldNews/MS): ಕಳೆದೊಂದು ದಶಕದಿಂದ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ವಾದ ಜೀವಂತವಾಗಿದೆ.ದಲಿತರ ವಿಚಾರದಲ್ಲಿ ಇನ್ನೆಷ್ಟು ದಿನ ಆತ್ಮವಂಚನೆ ಮಾಡುತ್ತೀರಿ? ಎಂದು ಬಿಜೆಪಿಯೂ ವಿಪಕ್ಷ ಕಾಂಗ್ರೆಸ್ ನ್ನು ಪ್ರಶ್ನಿಸಿದೆ.
ಈ ಕುರಿತಾಗಿ ರಾಜ್ಯ ಬಿಜೆಪಿ ಘಟಕವೂ ಸರಣಿ ಟ್ವೀಟ್ ಮಾಡಿದ್ದು," ಕಳೆದ ಒಂದು ದಶಕದಿಂದ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ವಾದ ಜೀವಂತವಾಗಿದೆ. ಆದರೆ ಕಾಂಗ್ರೆಸ್ ವರಿಷ್ಠರಾಗಲಿ, ತಾನೇ ದಲಿತ ಎಂದು ಪೋಸು ಕೊಡುವ ಸಿದ್ದರಾಮಯ್ಯ ಅವರಾಗಲಿ ಇದುವರೆಗೆ ಈ ವಾದವನ್ನು ಶಮನಗೊಳಿಸುವ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿದೆ.
ಮಾತ್ರವಲ್ಲದೆ ಕಾಂಗ್ರೆಸ್ ದಲಿತ ವಿರೋಧಿ ಎಂದು ಟೀಕಿಸಿದೆ.
ದಲಿತರು ಮುಖ್ಯಮಂತ್ರಿಯಾದರೆ ಸಂತೋಷ, ಸ್ವಾಗತ ಎಂದೆಲ್ಲ ಭಾಷಣ ಬಿಗಿಯುವ 'ಬುರುಡೆರಾಮಯ್ಯ' ಅವರೇ, ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂಬ ಪರಮೇಶ್ವರ್ ಅವರ ಹೇಳಿಕೆ ಗಮನಿಸಿದ್ದೀರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರೇ ಸಿಎಂ ಆಗಲಿದ್ದಾರೆ ಎಂದು ಘೋಷಿಸುವ ಧೈರ್ಯ ಇದೆಯಾ ಸಿದ್ದರಾಮಯ್ಯ? ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದೆ.
"2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದರ ಹಿಂದೆ ಪರಮೇಶ್ವರ್ ಅವರ ತನು,ಮನ,ಧನದ ಕೊಡುಗೆ ಇತ್ತಲ್ಲವೇ ಸಿದ್ದರಾಮಯ್ಯ?ಆದರೆ ಸಿಎಂ ಹುದ್ದೆ ಪಡೆಯುವುದಕ್ಕಾಗಿ ನೀವು ಅವರನ್ನು ಸಂಚು ಮಾಡಿ ಸೋಲಿಸಿದಿರಿ. ದಲಿತ ಸಮುದಾಯದ ಕನಸಿಗೆ ಮುಳ್ಳಾದವರು ನೀವು. ಒಮ್ಮೆಯೂ ನಿಮಗೆ ಪಾಪ ಪ್ರಜ್ಞೆ ಕಾಡಿಲ್ಲವೇ?
ಹೊಟ್ಟೆಪಾಡಿಗಾಗಿ ದಲಿತ ನಾಯಕರು ಬಿಜೆಪಿಗೆ ಹೋದರು ಎಂದು ಅವಮಾನ ಮಾಡಿದ ಸಿದ್ದರಾಮಯ್ಯನವರೇ, ದಲಿತ ನಾಯಕ ಪರಮೇಶ್ವರ ಅವರನ್ನು ಸಂಚು ಮಾಡಿ ಸೋಲಿಸಿದರು. ಈಗ ನಾನೂ ಕೂಡ ದಲಿತ, ದಲಿತರ ನೋವು ಗೊತ್ತೆಂದು ಕತೆ ಹೇಳುವುದು ಎಷ್ಟು ಸರಿ?ನಿಜವಾದ ಕಾಳಜಿ ಇದ್ದರೆ ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ" ಎಂದು ಸವಾಲ್ ಹಾಕಿದೆ.
ದಲಿತರು ಗ್ರಾಮ ಪಂಚಾಯತ್ ಅಧ್ಯಕ್ಷರಾದರೂ ಸಹಿಸಿಕೊಳ್ಳಲಾಗದ ಮನಃಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ. ಬಾಗಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಅತ್ಯಂತ ಅಮಾನವೀಯವಾದದ್ದು. ದಲಿತರಿಗೆ ಪಂಚಾಯತ್ ಅಧಿಕಾರ ಕೊಡುವುದಕ್ಕೇ ಒಪ್ಪದ ಕಾಂಗ್ರೆಸಿಗರು ದಲಿತ ಮುಖ್ಯಮಂತ್ರಿ ವಾದ ಒಪ್ಪುತ್ತಾರೆಯೇ? ಎಂದು ಗ್ರಾಮ ಪಂಚಾಯತಿಯ ದಲಿತ ಅಧ್ಯಕ್ಷೆ ಕುಳಿತ ಕುರ್ಚಿಯನ್ನು ಶುದ್ಧೀಕರಿಸಿದ ಘಟನೆಯ ವರದಿಯನ್ನು ಹಂಚಿಕೊಂಡು ಬಿಜೆಪಿ ಪ್ರಶ್ನಿಸಿದೆ.