ಬೆಂಗಳೂರು, ನ.16 (DaijiworldNews/HR): ಬಿಟ್ ಕಾಯಿನ್ ಪ್ರಕರಣದಲ್ಲಿ ಎರಡು ಬಾರಿ ಶ್ರೀಕಿಯನ್ನು ಬಂಧಿಸಿದ್ದು, ಬೇಲ್ ಮೇಲೆ ಬಿಡುಗಡೆ ಮಾಡಿದ್ದು, ಚಾರ್ಜ್ ಶೀಟ್ ದಾಖಲಿಸಿದ್ದು ಬಿಜೆಪಿ ಸರ್ಕಾರ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರೇ ಮಾಹಿತಿ ಕೊಡಬೇಕು. ಈ ಕೆಲಸ ಅವರಿಂದ ಆಗಲ್ಲ ಎಂದರೆ ಅಧಿಕಾರ ಬಿಟ್ಟು ಹೋಗಲಿ" ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ಎಲ್ಲಿಯಾದರೂ ವರದಿಯಾಗಿತ್ತೇ? ಯಾರಾದರೂ ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ್ದರೆ? ಆ ಕಾಲದಲ್ಲಿ ಅವರಿಗೆ ಇದು ಗೊತ್ತಿತ್ತೇ? ಗೊತ್ತಿದ್ದರೂ ಮುಚ್ಚಿಟ್ಟಿದ್ದರೇ?" ಎಂದು ಪ್ರಶ್ನಿಸಿದ್ದಾರೆ.
"ನಾನು ಮುಖ್ಯಮಂತ್ರಿಯಾಗಿದ್ದಾಗ ಶ್ರೀಕಿ ವಿರುದ್ದ ಯಾವ ದೂರೂ ದಾಖಲಾಗಿರಲಿಲ್ಲ. ಪ್ರಕರಣ ದಾಖಲಾಗಿ ವಿಚಾರಣೆ ನಡೆದಿದ್ದು ಬಿಜೆಪಿ ಕಾಲದಲ್ಲಿ. ನೀವ್ಯಾಕೆ ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಕೇಳುತ್ತಿದ್ದೇವೆ. ಈ ಪ್ರಶ್ನೆಗೆ ಮೊದಲು ಉತ್ತರಿಸಿ" ಎಂದಿದ್ದಾರೆ.