ನವದೆಹಲಿ, ನ 16 (DaijiworldNews/MS): ಸೂಕ್ತ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಸೂರ್ಯಾಸ್ತದ ನಂತರವೂ ಮಾಡುವ ಅವಕಾಶ ಸಿಗಲಿದ್ದು ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ರಾತ್ರಿಯಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿಸುವ ಹೊಸ ಪ್ರೋಟೋಕಾಲ್ ನ್ನು ಸಿದ್ದಪಡಿಸಿದ್ದು ಇದರಿಂದ ಅಂಗಾಗ ದಾನ ಮಾಡಲು ಮುಂದಾಗುವ ಮೃತರ ಸಂಬಂಧಿಕರಿಗೆ ಅನುಕೂಲವಾಗಲಿದೆ. ಆದರೆ ಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ದೇಹಗಳು , ಸಂಶಯಾತ್ಮಕ ಸಾವಿನ ಪ್ರಕರಣಕ್ಕೆ ಈ ನಿಯಮಗಳು ಅನ್ವಯವಾಗುವುದಿಲ್ಲ.
ಮಾತ್ರವಲ್ಲದೆ ಯಾವುದೇ ಅನುಮಾನವನ್ನು ತಳ್ಳಿಹಾಕಲು ಮತ್ತು ಕಾನೂನು ಉದ್ದೇಶಗಳಿಗಾಗಿ, ಭವಿಷ್ಯದ ಉಲ್ಲೇಖಕ್ಕಾಗಿ ಸಂರಕ್ಷಿಸಲು, ರಾತ್ರಿಯಲ್ಲಿ ನಡೆಸಲಾದ ಎಲ್ಲಾ ಮರಣೋತ್ತರ ಪರೀಕ್ಷೆಗಳಿಗೆ ಮರಣೋತ್ತರ ಪರೀಕ್ಷೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡಲಾಗುತ್ತದೆ
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಪರಿಣಿತ ಸಮಿತಿಯು ಸ್ವೀಕರಿಸಿದ ಹಲವಾರು ಪ್ರಾತಿನಿಧ್ಯಗಳ ತಾಂತ್ರಿಕ ಪರಿಶೀಲನೆಯ ನಂತರ ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೆಲವು ಸಂಸ್ಥೆಗಳು ಈಗಾಗಲೇ ರಾತ್ರಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿವೆ ಎಂದು ಸಮಿತಿಯು ತಿಳಿಸಿತ್ತು .ತಂತ್ರಜ್ಞಾನದಲ್ಲಿನ ತ್ವರಿತ ಪ್ರಗತಿ ಮತ್ತು ಸುಧಾರಣೆಯ ದೃಷ್ಟಿಯಿಂದ, ವಿಶೇಷವಾಗಿ ಮರಣೋತ್ತರ ಪರೀಕ್ಷೆಗೆ ಅಗತ್ಯವಾದ ಬೆಳಕಿನ ಮತ್ತು ಮೂಲಸೌಕರ್ಯಗಳ ಲಭ್ಯತೆಯ ದೃಷ್ಟಿಯಿಂದ, ಆಸ್ಪತ್ರೆಗಳಲ್ಲಿ ರಾತ್ರಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುವುದು ಈಗ ಕಾರ್ಯಸಾಧ್ಯವಾಗಿದೆ ಎಂದು ಸಮಿತಿಯು ತೀರ್ಮಾನಿಸಿತ್ತು.