ಬೆಂಗಳೂರು, ನ.15 (DaijiworldNews/PY): "ಇತಿಹಾಸ ಪುರುಷರನ್ನು ಜನರ ಮನಸ್ಸಿನಿಂದ ದೂರ ಮಾಡಲು ಬಿಜೆಪಿ ಕುತಂತ್ರ ಮಾಡುತ್ತಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ದೇಶದ ಪ್ರಥಮ ಪ್ರಧಾನಿ ನೆಹರು ಜನ್ಮದಿನಾಚಾರಣೆ ಪ್ರಯುಕ್ತ ಸಂಸತ್ತಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರ್ಯಾರು ಭಾಗವಹಿಸಿಲ್ಲ. ಇದು ಬಿಜೆಪಿ ನಾಯಕರ ದುರುದ್ದೇಶದ ನಡೆ. ಇತಿಹಾಸ ಪುರುಷರನ್ನು ಜನರ ಮನಸ್ಸಿನಿಂದ ದೂರ ಮಾಡಲು ಬಿಜೆಪಿ ಕುತಂತ್ರ ಮಾಡುತ್ತಿದೆ. ಆದರೆ ಆ ಕುತಂತ್ರ ಫಲಿಸುವುದಿಲ್ಲ. ನೆಹರು ಜನಮಾನಸದಲ್ಲಿ ಸದಾ ಉಳಿಯಲಿದ್ದಾರೆ" ಎಂದಿದ್ದಾರೆ.
"ಸಂಸತ್ತಿನಲ್ಲಿ ಪ್ರತಿವರ್ಷ ನೆಹರು ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಒಬ್ಬರಾದರೂ ಸಚಿವರು ಆಗಮಿಸಬೇಕಿತ್ತು. ಸೈದಾಂತಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಮೊದಲ ಪ್ರಧಾನಿಗೆ ಗೌರವ ಕೊಡುವುದು ಸಂಸ್ಕಾರ. ಆದರೆ ಬಿಜೆಪಿ ದ್ವೇಷದ ರಾಯಭಾರಿಗಳಂತೆ ವರ್ತಿಸುತ್ತಿದೆ" ಎಂದು ಆರೋಪಿಸಿದ್ದಾರೆ.