ಬೆಂಗಳೂರು, ನ.15 (DaijiworldNews/PY): "ಕಾಂಗ್ರೆಸ್ ನಾಯಕರು ಮುಚ್ಚಿಟ್ಟಿದ್ದ ಬಿಟ್ ಕಾಯಿನ್ ಹಗರಣವನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ" ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮ ಸರ್ಕಾರ ಅವಧಿಯಲ್ಲಿ ಹ್ಯಾಕರ್, ಬಿಟ್ ಕಾಯಿನ್ ಆರೋಪಿಗಳನ್ನು ಬಂಧಿಸಿದ್ದೇವೆ. ಆತನಿಗೆ ಜಾಮೀನು ಕೂಡಾ ಸಿಕ್ಕಿದೆ. ಆದರೆ, ಆತನ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ನಾವು ಬಿಟ್ ಕಾಯಿನ್ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿದ್ದೇವೆ" ಎಂದಿದ್ದಾರೆ.
"ಕೈ ನಾಯಕರು ಸುಳ್ಳಿನ ಸರದಾರರು. ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಕಳೆದ ಬಾರಿ ರಫೇಲ್ ವಿಚಾರ ಪ್ರಸ್ತಾಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಆರೋಪ ಮಾಡಿದ್ದರು. ಇದೀಗ ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಮಾಡುತ್ತಿರುವ ಆರೋಪಗಳು ಸುಳ್ಳು. ಬಿಜೆಪಿ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ದಾಖಲೆ ಬಿಡುಗಡೆ ಮಾಡಲಿ. ದಾಖಲೆ ಕೊಟ್ಟ ಒಂದು ಗಂಟೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
"ಮೊಹಮ್ಮದ್ ನಲಪಾಡ್ನನ್ನು 2018ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆಗ ಶ್ರೀಕಿಯನ್ನು ಏಕೆ ಕಾಂಗ್ರೆಸ್ ನಾಯಕರು ಬಂಧಿಸಿಲಿಲ್ಲ?. ಶ್ರೀಕಿಯನ್ನು ಬಂಧಿಸದೇ ಒತ್ತಡ ಹೇರಿದ್ದು ಯಾರು?. ಎಂಟು ತಿಂಗಳ ಕಾಲ ಶ್ರೀಕಿ ಇಲ್ಲಿಯೇ ಇದ್ದರೂ ಕೂಡಾ ಆತನನ್ನು ಏನೂ ಮಾಡಲಿಲ್ಲ ಏಕೆ?" ಎಂದು ಕೇಳಿದ್ಧಾರೆ.