ಪಾಲಕ್ಕಾಡ್, ನ 15 (DaijiworldNews/MS): ಆರೆಸ್ಸೆಸ್ ಕಾರ್ಯಕರ್ತನನ್ನು ಹಾಡಹಗಲೇ ಬರ್ಬರವಾಗಿ ನಾಲ್ವರ ತಂಡವೊಂದು ಕಡಿದು ಹತ್ಯೆ ಮಾಡಿದ ಘಟನೆ ಕೇರಳದ ಮೊಂಬರಂನಲ್ಲಿ ಸೋಮವಾರ ನಡೆದಿದೆ.
ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಎಲಪ್ಪುಳ್ಳಿ ವಲಯದ ಬೌಧಿಕ್ ಪ್ರಮುಖ್ ಸಂಜಿತ್ (27) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಪತ್ನಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಂಜಿತ್ ಬೈಕನ್ನು ಅಡ್ಡಗಟ್ಟಿ ಕೆಳಕೆ ಬೀಳಿಸಿ ಪತ್ನಿಯ ಮುಂದೆಯೇ ಮಾರಕಾಯುಧಗಳಿಂದ ಕೊಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸದಸ್ಯರ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೇರಳದ ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಾಲಕ್ಕಾಡ್ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಂ.ಹರಿದಾಸ್, ಈ ಹತ್ಯೆಯನ್ನು ಎಸ್ಡಿಪಿಐನ "ಉತ್ತಮ ಯೋಜಿತ" ರಾಜಕೀಯ ಕೊಲೆ ಎಂದು ವಾಗ್ದಾಳಿ ನಡೆಸಿದ್ದಾರೆ. ಎಲ್ಡಿಎಫ್ ಸರಕಾರ ಎಸ್ಡಿಪಿಐಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ
ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದು, ಕೇರಳದಲ್ಲಿನ ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.