ಮೈಸೂರು, ನ.15 (DaijiworldNews/PY): "ಜನಾಭಿಪ್ರಾಯದ ವಿರುದ್ದ ಮಾತನಾಡಿದ ಬಳಿಕ ಕ್ಷಮೆಯಾಚಿಸುವುದು ಛಾಳಿಯಾಗಿದೆ. ಹಂಸಲೇಖ ಅವರು ಪರಿಜ್ಞಾನದಿಂದ ಮಾತನಾಡಬೇಕಿತ್ತು" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಸ್ಲಿಂ ಸ್ಲೇಹಿತರನ್ನು ನಿಮ್ಮ ಮನೆಗೆ ಕರೆದು ಹಂದಿ ಮಾಂಸದ ಊಟ ಹಾಕಿ. ಆಗ ಅವರು ತಿನ್ನುತ್ತಾರಾ ನೋಡಿ. ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಹಾಗಾಗಿ ಅವರು ಹಂದಿ ಮಾಂಸ ತಿನ್ನುವುದಿಲ್ಲ. ಆತ ಅದನ್ನು ತಪ್ಪು ಎಂದು ಹೇಳುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
"ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಸಸ್ಯಾಹಾರ ಸಾಧು-ಸಂತರ ಆಹಾರ ಪದ್ಧತಿ. ಮನಸ್ಸಿನ ತಾರತಮ್ಯ ತೆಗೆದು ಹಾಕಲು ಹೋಗಿದ್ದರೇ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ" ಎಂದು ತಿಳಿಸಿದ್ದಾರೆ.
"ಹಂಸಲೇಖ ಅವರು ಬಾಯಿ ತಪ್ಪಿನಿಂದ ಈ ರೀತಿಯಾಗಿ ಹೇಳಿದ್ದಾರೆ ಎಂದೆನಿಸುತ್ತಿಲ್ಲ. ಪ್ರಗತಿಪರ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದು ಪ್ರಚಾರಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ" ಎಂದಿದ್ದಾರೆ.