ನವದೆಹಲಿ, ನ.15 (DaijiworldNews/PY): ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ ಎಂದಿದ್ದ ನಟಿ ಕಂಗನಾ ರಣಾವತ್ ವಿರುದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಓವೈಸಿ, "ಮೇಡಂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿದ್ದಾರೆ. 2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದೆ ಎನ್ನುತ್ತಿದ್ದಾರೆ. ಯಾರಾದರೂ ಮುಸ್ಲಿಮರು ಇದೇ ಮಾತನ್ನು ಹೇಳಿದ್ದರೆ ಕಪಾಳ ಮೋಕ್ಷ ಮಾಡಲಾಗುತ್ತಿತ್ತು. ಮೊಣಕಾಲಿಗೆ ಗುಂಡು ಹಾರಿಸಿ, ಜೈಲಿಗಟ್ಟುತ್ತಿದ್ದರು" ಎಂದಿದ್ದಾರೆ.
"ಇದೇ ಮಾತನ್ನು ಮುಸ್ಲಿಮರು ಹೇಳಿದ್ದರೆ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಆಕೆ ರಾಣಿ, ನೀವು ರಾಜ. ಹಾಗಾಗಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ 2014ರಲ್ಲಿ ಭಾರತಕ್ಕೆ "ನಿಜವಾದ ಸ್ವಾತಂತ್ರ್ಯ" ಸಿಕ್ಕಿತು. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದರು.
"ಸಂದರ್ಶನದಲ್ಲಿ ನಾನು ಸ್ವಾತಂತ್ರ್ಯ ಹೋರಾಟಗಾರರಿಗೆ ಅಥವಾ ಹುತಾತ್ಮರಿಗೆ ಅಪಮಾನ ಮಾಡಿದ್ದು ನಿಜ ಎನ್ನುವುದು ಸಾಬೀತುಪಡಿಸಿದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಾಸ್ಸು ನೀಡುತ್ತೇನೆ" ಎಂದಿದ್ದರು.