ಬೆಂಗಳೂರು, ನ 15 (DaijiworldNews/MS): ’ಕುಟುಂಬ ರಾಜಕಾರಣದ ವಿರಾಟ್ ದರ್ಶನ ಆಗುತ್ತಿರುವುದು ಬಿಜೆಪಿಯಲ್ಲೇ ’ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿಗೆ ಬಿಜೆಪಿ ತಿರುಗೇಟು ನೀಡಿದ್ದು ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವೂ, "ಮಾನ್ಯ ಕುಮಾರಸ್ವಾಮಿಯವರೇ, ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ.ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಕುಟುಂಬ ರಾಜಕಾರಣದ ಭಾಗವೇ? "ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ "ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ?ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಜೆಡಿಎಸ್ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ ಎಂದು ಲೇವಡಿ ಮಾಡಿದೆ.