ಬೆಂಗಳೂರು, ನ.15 (DaijiworldNews/PY): "ಬಿಟ್ ಕಾಯಿನ್ ಹಗರಣದ ಬಗ್ಗೆ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡಬೇಡಿ. ದಾಖಲೆಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಿ, ಈ ಬಗ್ಗೆ ಜನರಿಗೆ ಸಂಪೂರ್ಣವಾದ ಮಾಹಿತಿ ನೀಡಿ" ಎಂದು ಹೈಕಮಾಂಡ್ ಸೂಚನೆ ನೀಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲಾ ಅವರು ಸದಸ್ಯತ್ವ ನೋಂದಣಿ ಅಭಿಯಾನದ ಬಳಿಕ ರಾಜ್ಯ ನಾಯಕರೊಂದಿಗೆ ಪ್ರತ್ಯೇಕವಾದ ಸಭೆ ನಡೆಸಿದ್ದು, ಬಿಟ್ ಕಾಯಿನ್ ದಂಧೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.
"ಬಿಟ್ ಕಾಯಿನ್ ಕುರಿತು ರಾಜ್ಯದಲ್ಲಿ ಕೆಪಿಸಿಸಿಯಿಂದ ಪ್ರಾರಂಭಿಸಲಾಗಿರುವ ನೂತನ ಸಂಶೋಧನಾ ಕೇಂದ್ರ, ಕಾನೂನು ಹಾಗೂ ಐಟಿ ಘಟಕಗಳು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಬೇಕು" ಎಂದು ಸೂಚನೆ ನೀಡಿದೆ.
"ಮುಂದಿನ ವರ್ಷ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್, ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲಿದೆ. ಇದಕ್ಕೂ ಮುನ್ನ ಇಲ್ಲಿಯರೆಗೂ ಅಕ್ರಮವಾಗಿ ನಡೆದಿರುವ ವ್ಯವಹಾರಗಳ ಕುರಿತು ಜನರಿಗೆ ಸಂಪೂರ್ಣವಾದ ಮಾಹಿತಿ ನೀಡಿ" ಎಂದು ಹೈಕಮಾಂಡ್ ತಿಳಿಸಿದೆ.
ಬಿಟ್ ಕಾಯಿನ್ ದಂಧೆ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ವ್ಯವಹಾರ ಹೇಗೆ ನಡೆದಿದೆ. ಇದರಿಂದ ಜನಸಾಮಾನ್ಯರಿಗಾದ ನಷ್ಟವೇನು?. ಹೇಗೆ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿದೆ ಎನ್ನುವ ಬಗ್ಗೆ ಗೊಂದಲಗಳಿವೆ. ಈ ಗೊಂದಲಗಳನ್ನು ಬಗೆಹರಿಸಿ ಬಿಟ್ಕಾಯಿನ್ ವ್ಯವಹಾರಕ್ಕೆ ಹಗರಣದ ಸ್ಪಷ್ಟ ರೂಪ ನೀಡಲು ಕಾಂಗ್ರೆಸ್ ಯತ್ನಿಸುತ್ತಿದೆ.
ದೆಹಲಿಯಲ್ಲಿ ರಣದೀಪ್ಸಿಂಗ್ ಸುರ್ಜೇವಾಲಾ ಅವರು ಪತ್ರಿಕಾಗೋಷ್ಟಿ ನಡೆಸುವ ಮುಖೇನ ಬಿಟ್ ಕಾಯಿನ್ ಹಗರಣಕ್ಕೆ ರಾಷ್ಟ್ರೀಯ ಸ್ವರೂಪ ನೀಡಿದರು. ಕಾಂಗ್ರೆಸ್ ಕಲೆ ಹಾಕುತ್ತಿರುವ ಮಾಹಿತಿಯ ಪ್ರಕಾರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದು 50 ಸಾವಿರ ಕೋಟಿ ರೂ. ಗೂ ಅಧಿಕ ಮಟ್ಟದ ಬೃಹತ್ ಹಗರಣ ಎಂದು ಹೇಳಲಾಗುತ್ತಿದೆ.