ಪುಣೆ, ನ 15 (DaijiworldNews/MS): ಖ್ಯಾತ ಇತಿಹಾಸಕಾರ-ಲೇಖಕ ಹಾಗೂ ಪದ್ಮವಿಭೂಷಣ ಬಾಬಾಸಾಹೇಬ್ ಪುರಂದರೆ ನ.15 ರ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. 99 ವರ್ಷದ ಅವರು ಕೆಲವು ದಿನಗಳ ಹಿಂದೆ ವಯೋಸಹಜ ಕಾಯಿಲೆಗಳಿಂದಾಗಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ವೆಂಟಿಲೇಟರ್ ಬೆಂಬಲದಲ್ಲಿದ್ದರು.
ಬಾಬಾಸಾಹೇಬ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಲವಂತ ಮೋರೇಶ್ವರ ಪುರಂದರೆ ಅವರು ಮರಾಠಿಯಲ್ಲಿ ಶಿವಾಜಿ ಮಹಾರಾಜ್ ಕುರಿತು ಪುರಂದರೆ ಅವರು ಎರಡು ಭಾಗಗಳಲ್ಲಿ ರಚಿಸಿರುವ 900 ಪುಟಗಳ ಕೃತಿ 'ರಾಜಾ ಶಿವಛತ್ರಪತಿ' ಜನಪ್ರಿಯತೆ ಪಡೆದಿದೆ. ಮೊದಲ ಬಾರಿಗೆ 1950ರಲ್ಲಿ ಪ್ರಕಟಗೊಂಡ ಕೃತಿಯು ಈವರೆಗೂ ಹಲವು ಬಾರಿ ಮರುಮುದ್ರಣ ಕಂಡಿದೆ ಹಾಗೂ ಮರಾಠಿಗರ ಪ್ರತಿ ಮನೆಯಲ್ಲಿ ಸ್ಥಾನ ಪಡೆದಿದೆ. 1980ರ ದಶಕದಲ್ಲಿ ಶಿವಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿ ''ಜಂತ ರಾಜ' ' ನಾಟಕವನ್ನು ರಚಿಸಿ, ನಿರ್ದೇಶಿಸಿದರು. ಈ ನಾಟಕ 200 ಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಿದ್ದಾರೆ ಮತ್ತು ಐದು ಭಾಷೆಗಳಲ್ಲಿ ಅನುವಾದಿಸಿ ಅಭಿನಯಿಸಿದ್ದಾರೆ.
ಅವರಿಗೆ 2019 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಮತ್ತು 2015 ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪುರಂದರೆ ಅವರ ನಿಧನಕ್ಕೆ ಪ್ರಧಾನಿ ಮೋದಿ ಚಿತ್ರ ಸಹಿತ ಟ್ವೀಟ್ ಮಾಡುವ ಮೂಲಕ ಬಾಬಾಸಾಹೇಬ್ ಪುರಂದರೆ ಅವರಿಗೆ ಸಂತಾಪ ಸೂಚಿಸಿದ್ದಾರೆ.