ನವದೆಹಲಿ, ನ.15 (DaijiworldNews/PY): ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ವದಂತಿ ಹಬ್ಬುತ್ತಿರುವ ಕರ್ನಾಟಕ ಬಿಜೆಪಿ ಮುಖಂಡರನ್ನು ಹತೋಟಿಯಲ್ಲಿ ಇಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ತಮ್ಮ ಹಾಗೂ ಬಿಜೆಪಿ ಸರ್ಕಾರದ ವಿರುದ್ದ ಇಬ್ಬರು ಸಚಿವರು ಸೇರಿದಂತೆ ತಮ್ಮದೇ ಪಕ್ಷದ ಮುಖಂಡರು ವದಂತಿ ಹಬ್ಬಿಸುತ್ತಿದ್ದಾರೆ. ಕೈ ನಾಯಕರಿಗೆ ಅವರೇ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕೆಲವು ಸಚಿವರು ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾಯಕರನ್ನು ಹದ್ದುಬಸ್ತಿನಲ್ಲಿಡುವ ವಿಚಾರವನ್ನು ಪಕ್ಷ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದ ಶಾ, ಬಿಟ್ ಕಾಯಿನ್ ವಿಚಾರದ ಸಂಬಂಧ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಸೂಕ್ತವಾದ ತಿರುಗೇಟು ನೀಡಬೇಕು ಎಂದಿದ್ದರು. ಬೊಮ್ಮಾಯಿ ಸಮಕ್ಷಮದಲ್ಲೇ ನಡ್ಡಾ ಅವರಿಗೆ ಕರೆ ಮಾಡಿ, ವದಂತಿ ಹಬ್ಬಿಸುತ್ತಿರುವ ನಾಯಕರಿಗೆ ಲಗಾಮು ಹಾಕುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.