ತಿಪಟೂರು, ನ.14 (DaijiworldNews/PY): ಅಂಗನವಾಡಿ ಸಹಾಯಕಿಯೋರ್ವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಭಾರತಿ (30) ಎಂದು ಗುರುತಿಸಲಾಗಿದೆ.
ಭಾರತಿ ಅವರ ಮತಿ ನಾಗರಾಜ್ ಅವರ ಅಕ್ಕನ ಮಗ ದಿವಾಕರ್ (25) ಎಂಬುವವರು ಅಂಗನವಾಡಿ ಕಟ್ಟಡದ ಹಿಂಭಾಗ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಘಟನೆಯನ್ನು ನೋಡಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ತಿಳಿದ ಕೆಲವು ಸಾರ್ವಜನಿಕರು ಮಹಿಳೆಯನ್ನು ಕಾಪಾಡಲೆಂದು ಹೋದ ವೇಳೆ ನಿಮ್ಮನ್ನೂ ಕೂಡಾ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹೊನ್ನವಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.