ಬೆಂಗಳೂರು, ನ.14 (DaijiworldNews/PY): "ಪಕ್ಷ ಪೂಜೆ ಮಾಡಬೇಕು, ವ್ಯಕ್ತಿ ಪೂಜೆಯಲ್ಲ. ಯಾವುದೇ ವ್ಯಕ್ತಿಯ ಪರವಾಗಿ ಘೋಷಣೆ ಕೂಗಬಾರದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕೆಲವು ಮಂದಿ ಡಿ.ಕೆ, ಡಿ.ಕೆ ಎಂದು ಕೂಗುತ್ತಿದ್ದರು. "2023ರ ವಿಧಾನಸಭಾ ಚುನಾವಣೆಗೂ ಈ ಹುಮ್ಮಸ್ಸು ಇರಬೇಕು. ಹಾಗಾಗಿ ಘೋಷಣೆ ಕೂಗುವವರು ಶಾಂತಿಯಿಂದಿರಿ" ಎಂದು ಬಿ ಎಲ್ ಶಂಕರ್ ಮನವಿ ಮಾಡಿದರು. ಆದರೂ, ಘೋಷಣೆ ಕೂಗುವುದು ಮಾತ್ರ ತಪ್ಪಲಿಲ್ಲ.
ಈ ವೇಳೆ ಮಾತನಾಡಲು ನಿಂತ ಡಿ.ಕೆ ಶಿವಕುಮಾರ್ ಕೂಡಾ ಘೋಷಣೆ ಕೂಗುವವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಕೂಗುತ್ತಿದ್ದಾಗ ಕೋಪಗೊಂಡ ಡಿ ಕೆ ಶಿವಕುಮಾರ್, "ಯಾವ ಡಿ.ಕೆ? ವ್ಯಕ್ತಿ ಪೂಜೆ ಮಾಡುವವರು ಕಾಂಗ್ರೆಸ್ಗೆ ದ್ರೋಹ ಮಾಡುತ್ತಿದ್ದೀರಾ? ಇಲ್ಲಿ ವ್ಯಕ್ತಿ ಪೂಜೆ ಅಲ್ಲ ಪಕ್ಷ ಪೂಜೆ ನಡೆಯಬೇಕು" ಎಂದಿದ್ದಾರೆ.
"ನನ್ನ ಮೇಲೆ ಪ್ರೀತಿ ಇರುವವರು ಶಾಂತಿಯಿಂದ ವರ್ತಿಸಿ, ಒಂದು ವೇಳೆ ನಿಮಗೆ ಘೋಷಣೆ ಕೂಗಲೇಬೇಕೆಂದರೆ ಎದ್ದು ಹೊರಗಡೆ ಹೋಗಿ, ಪಕ್ಷ ಸಂಘಟನೆಗೆ ತಯಾರಾಗಿ, ವ್ಯವಸ್ಥಿತವಾಗಿ ನಡೆಯುತ್ತಿರುವ ಕಾರ್ಯಕ್ರಮವನ್ನು ಹಾಳು ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ.