ಬೆಂಗಳೂರು, ನ.14 (DaijiworldNews/HR): ಕಾಂಗ್ರೆಸ್ನ ಅಪಪ್ರಚಾರ ಮತ್ತು ಸುಳ್ಳಿನ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ. ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ನೂರು ಸುಳ್ಳು ಹೇಳುವ ನಿಮ್ಮ ಕುತಂತ್ರಗಳನ್ನು ಜನರ ಮುಂದಿಡಲೇಬೇಕು. ಸಚಿವರು ಮಾತ್ರವಲ್ಲ, ಪ್ರತಿಯೊಬ್ಬ ಕಾರ್ಯಕರ್ತ ಕೂಡ ಕಾಂಗ್ರೆಸ್ ಪಕ್ಷದ ನಾಟಕವನ್ನು ಬಯಲಿಗೆಳೆಯಲು ಸಿದ್ಧರಾಗಿದ್ದಾರೆ. ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಪ್ರಿಯಾಂಕ್ ಖರ್ಗೆ ಅವರ ಸಾಂದರ್ಭಿಕ ಮರೆವು, ಜಾಣ ಕುರುಡು, ಕೀಳು ರಾಜಕೀಯದ ಆಲೋಚನೆಗಳು ಯಾರನ್ನು ಮೆಚ್ಚಿಸಲು ಎನ್ನುವುದು ಜನರಿಗೆ ತಿಳಿದಿದೆ. ಚಳಿ, ಮಳೆ, ಗಾಳಿಗಳ ಕಷ್ಟ ಅರಿಯದ ಅವರು ಆನುವಂಶಿಕ ನೆರಳಿನಲ್ಲೇ ವಿಹರಿಸಲಿ, ಆದರೆ ಸಂಪುಟ ಸಚಿವರಿಗೆ ಸರ್ಕಾರದ ಪರವಾಗಿ ಮಾತನಾಡುವ ಸಾಮೂಹಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು "ಇದು ಕಾಂಗ್ರೆಸ್ ಮುಖಂಡರ ಹತಾಶೆ, ಜನರನ್ನು ಹೇಗಾದರೂ ದಾರಿ ತಪ್ಪಿಸಬೇಕೆನ್ನುವ ಆತುರದ ಪ್ರದರ್ಶನವಲ್ಲದೆ ಇನ್ನೇನೂ ಅಲ್ಲ. ಈ ಕೀಳು ರಾಜಕೀಯ ಕಾಂಗ್ರೆಸ್ಸಿಗೆ ಸರಿ. ಪ್ರಿಯಾಂಕ್ ಖರ್ಗೆ ಐಟಿ ಸಚಿವರಾಗಿದ್ದಾಗ, ನಂತರ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಕೇವಲ ಅವರ ಇಲಾಖೆ ಬಗ್ಗೆ ಮಾತ್ರ ಮಾತನಾಡಿದ್ದರೇ ಎಂದು ಒಮ್ಮೆ ನೆನೆಪು ಮಾಡಿಕೊಳ್ಳಲಿ" ಎಂದರು.