ಗೋರಖ್ಪುರ, ನ.14 (DaijiworldNews/HR): ಕೇಂದ್ರ ಸರಕಾರವು ಈಗ ಎಲ್ಲವನ್ನೂ ಮಾರುತ್ತಿದೆ. ಈ ಹಿಂದೆ "ಫೇಕು" ಸರಕಾರವಾಗಿದ್ದಾಗ ಎಲ್ಲವೂ ಸರಿಯಾಗಿತ್ತು, ಆದರೆ ಈಗ "ಬೆಚು" ಸರಕಾರವಿದ್ದು, ಎಲ್ಲಾ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರದ ವಿರುದ್ದ ವಾಗ್ದಾಳಿ ನಡೇಸಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಇತ್ತೀಚಿನ ಮಾರಾಟ ಹಾಗೂ ವಿವಿಧ ಸಾರ್ವಜನಿಕ ವಲಯದ ಘಟಕಗಳಿಂದ ಹೂಡಿಕೆ ಹಿಂತೆಗೆದುಕೊಳ್ಳುವಿಕೆಯ ಮಾತುಕತೆಗಳನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು "ಬೆಚು" (ಮಾರಾಟಗಾರ)ಸರಕಾರ ಎಂದು ಕರೆದಿದ್ದು, ಈ "ಬೆಚು" ಸರಕಾರ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ" ಎಂದರು.
ಇನ್ನು ದೇಶದ ವಿವಿಧ ತೈಲ ಕಂಪನಿಗಳು ಇಂಧನ ಮಾರಾಟದಲ್ಲಿ 600 ಪ್ರತಿಶತದಷ್ಟು ಲಾಭವನ್ನು ಗಳಿಸಿದ್ದು, ಸರಕಾರವು "ಬಡವರ ಜೇಬುಗಳಿಗೆ ಕತ್ತರಿಹಾಕಿ" ಹಾಗೂ "ಶ್ರೀಮಂತರ ಬೊಕ್ಕಸವನ್ನು ತುಂಬುತ್ತಿದೆ" ಎಂದು ಆರೋಪಿಸಿದ್ದಾರೆ.