ಬೆಂಗಳೂರು, ನ.14 (DaijiworldNews/PY): "ಕಾಂಗ್ರೆಸ್ ನಾಯಕರ ಶಂಕಿತ ಬಿಟ್ ಕಾಯಿನ್ ಹಗರಣದಲ್ಲಿ ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಕಾಂಗ್ರೆಸ್ ನಾಯಕರ ಶಂಕಿತ ಬಿಟ್ ಕಾಯಿನ್ ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು? ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ? ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ" ಎಂದು ತಿಳಿಸಿದೆ.
"2018 ರಲ್ಲೇ ಹಗರಣದ ಆರೋಪಿ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಜೊತೆ ಸ್ನೇಹ ಸಂಬಂಧ ಹೊಂದಿದ್ದ. ರಾಬಿನ್ ಖಂಡೇವಾಲ್ ಹೇಳಿಕೆ ಪ್ರಕಾರ ನಲಪಾಡ್ ಜೊತೆ ಸ್ನೇಹ ಇರುವ ಅವಧಿಯಲ್ಲೇ ಆರೋಪಿಯು ಬಿಟ್ಕಾಯಿನ್ ಹ್ಯಾಕ್ ಮಾಡಿ ತನ್ನ ವ್ಯಾಲೆಟ್ನಲ್ಲಿಟ್ಟುಕೊಂಡಿರುವ ವಿಚಾರ ತಿಳಿಸಿದ್ದ" ಎಂದಿದೆ.
"ಪ್ರಸ್ತಾವಿತ ಬಿಟ್ ಕಾಯಿನ್ ಹಗರಣದಲ್ಲಿ ಇದುವರೆಗೆ ಲಭ್ಯ ಇರುವ ದಾಖಲೆ ಪ್ರಕಾರ ಯುವ ಕಾಂಗ್ರೆಸ್ ಮುಂದಿನ ಅಧ್ಯಕ್ಷ ನಲಪಾಡ್ ಒಬ್ಬರೇ ಆರೋಪಿ ಶ್ರೀಕಿ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ರಾಜಕೀಯ ಹಿನ್ನೆಲೆಯ ವ್ಯಕ್ತಿ. ಇವರನ್ನು ಬಿಟ್ಟರೆ ಬೇರೆ ಇನ್ಯಾರು ಇಲ್ಲ, ಕಾಂಗ್ರೆಸ್ ಇದನ್ನೇಕೆ ಮರೆ ಮಾಚುತ್ತಿದೆ?" ಎಂದು ಪ್ರಶ್ನಿಸಿದೆ.
"ಮೊಹಮ್ಮದ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಪ್ತ. ಡಿಕೆಶಿ ಅವರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಭಾವಿ ಅಳಿಯ ರಾಬರ್ಟ್ ವಾದ್ರಾಗೆ ಆಪ್ತ. ಹಾಗಾದರೆ ಈ ಪ್ರಕರಣದ ರೂವಾರಿಗಳು...? ಜಾಯಿನ್ ದ ಡಾಟ್ಸ್. ಡಿಕೆಶಿ ಬಣದ ನಲಪಾಡ್ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ಒಂದು ರಾಜಕೀಯದ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ನಾಯಕರಿಬ್ಬರ ನಡುವೆ ಇರುವ ರಾಜಕೀಯ ವೈಷಮ್ಯದ ಪ್ರತಿಫಲನವಷ್ಟೇ. ಅದರಿಂದಾಚೆಗೆ ಬೇರೇನಿಲ್ಲ.ಹಾಗಾದರೆ ಇದರ ಹಿಂದಿರುವುದು!?" ಎಂದು ಕೇಳಿದೆ.
"ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಬಿಟ್ ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ" ಎಂದು ಆರೋಪಿಸಿದೆ.