ದಾವಣಗೆರೆ, ನ.14 (DaijiworldNews/PY): ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.
ಮೃತಬಾಲಕರನ್ನು ಮೊಹಮ್ಮದ್ ಆಫಾನ್ (10), ಮೊಹಮ್ಮದ್ ಆಶಿಕ್ (8) ಹಾಗೂ ಸೈಯದ್ ಫೈಜಾನ್ (11) ಎಂದು ಗುರುತಿಸಲಾಗಿದೆ.
ನ.13ರ ಶನಿವಾರ ಮಧ್ಯಾಹ್ನ ಮೂವರು ಬಾಲಕರು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ವಾಪಾಸ್ಸಾಗದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ನಂತರ ಕೆರೆಯಲ್ಲಿ ಈಜಲು ಹೋಗಿರುವ ಕುರಿತು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೀನುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಸಂದರ್ಭ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.