ಬೆಂಗಳೂರು, ನ.14 (DaijiworldNews/PY): "ಕಾಂಗ್ರೆಸ್ ಬಳಿ ಬಿಟ್ ಕಾಯಿನ್ಗೆ ಸಂಬಂಧಿಸಿದಂತೆ ದಾಖಲೆಗಳಿದ್ದಲ್ಲಿ ನೀಡಲಿ" ಎಂದು ಮುಖ್ಯಮಂತ್ರಿ ಬಸವರಾಜವವ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಟ್ ಕಾಯಿನ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬಳಿ ದಾಖಲೆಗಳಿದ್ದರೆ ನೀಡಲಿ. ದಾಖಲೆಗಳಿದ್ದಲ್ಲಿ ನಮಗೆ ನೀಡಲಿ ಅಥವಾ ಇಡಿಗಾದರೂ ನೀಡಲಿ. ಕಾಂಗ್ರೆಸ್ ದಾಖಲೆ ನೀಡಿದಲ್ಲಿ ನಾವು ಬಿಟ್ ಕಾಯಿನ್ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ" ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸಚಿವ ಸುರ್ಜೇವಾಲ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, "2018ರಿಂದಲೂ ಬಿಟ್ ಕಾಯಿನ್ ಪ್ರಕರಣ ಇದೆ ಎನ್ನುತ್ತಾರೆ. ಆ ವೇಳೆ ಅವರದ್ದೇ ಸರ್ಕಾರ ಇತ್ತು. ಆಗ ಏಕೆ ಕ್ರಮ ಕೈಗೊಳ್ಳಲಿಲ್ಲ. ಆರೋಪಿಯನ್ನು ಬಂಧಿಸಿ ಸೂಕ್ತವಾಗಿ ವಿಚಾರಣೆ ನಡೆಸದೇ ಬಿಟ್ಟು ದೊಡ್ಡ ಪ್ರಮಾದವಾದಾಗ ಪ್ರಶ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.