ಬೆಂಗಳೂರು, ನ.14 (DaijiworldNews/PY): "ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ?" ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
"ಬಿಟ್ ಕಾಯಿನ್ ದಂಧೆ ವಿಚಾರವನ್ನು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಅಸ್ತ್ರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ. ಬಿಜೆಪಿ ಸಚಿವರು, ಪ್ರಮುಖ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ" ಎನ್ನುವುದು ಕಾಂಗ್ರೆಸ್ಸಿಗರ ಆರೋಪ.
ಈ ವಿಚಾರವಾಗಿ ಶನಿವಾರ ರಾತ್ರಿ ಸುದ್ದಿಗೋಷ್ಟಿ ನಡೆಸಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, "ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಯಾವುದೇ ವಿಚಾರವನ್ನು ಮುಚ್ಚಿಡುತ್ತಿಲ್ಲ. ಯಾವುದೇ ಸತ್ಯವನ್ನು ಅಥವಾ ಯಾರನ್ನೂ ರಕ್ಷಿಸಲು ಬಯಸುವುದಿಲ್ಲ. ನಾವೇ ತನಿಖೆ ಆದೇಶಿಸಿದ್ದು, ಎಲ್ಲಾ ಸಾಕ್ಷ್ಯಳು ಶೀಘ್ರದಲ್ಲೇ ಸರ್ಕಾರದ ಮುಂದೆ ಬರಲಿದೆ" ಎಂದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಹೆಚ್ಎಂ ಅಂದರೆ ಹೋಮ್ ಮಿನಿಸ್ಟರ್ ಅನ್ನಬೇಕೋ, ಹೆಲ್ತ್ ಮಿನಿಸ್ಟರ್ ಅನ್ನಬೇಕೋ? ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ? ನಾಳೆ ಗೃಹ ಸಚಿವರು ಬಂದು ರಾಜ್ಯದ ಕರೋನಾ ಲಸಿಕೆಯ ಮಾಹಿತಿ ನೀಡ್ತಾರಾ?" ಎಂದು ಕೇಳಿದ್ದಾರೆ.