ಭೋಪಾಲ್, ನ.14 (DaijiworldNews/PY): "ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಹಸು, ಅದರ ಸೆಗಣಿ ಹಾಗೂ ಮೂತ್ರವು ಬಲಪಡಿಸುತ್ತದೆ. ಆರ್ಥಿಕವಾಗಿ ದೇಶವನ್ನು ಸಮರ್ಥವಾಗಿಸುತ್ತದೆ" ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಭಾರತೀಯ ಪಶುವೈದ್ಯಕೀಯ ಸಂಘದಿಂದ ಆಯೋಜಿಸಲಾದ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, "ಗೋವುಗಳ ರಕ್ಷಣೆಗಾಗಿ ಸರ್ಕಾರವು ಗೋಶಾಲೆಗಳನ್ನು ಸ್ಥಾಪಿಸಿದೆ. ಆದರೆ, ಸರಿಯಾಗಿ ಕಾರ್ಯನಿರ್ವಹಿಸಲು ಸಮಾಜದ ಪಾಲ್ಗೊಳ್ಳುವಿಕೆ ಮುಖ್ಯ" ಎಂದಿದ್ದಾರೆ.
"ನಾವು ಬಯಸಿದ್ದಲ್ಲಿ ನಮ್ಮ ಆರ್ಥಿಕತೆಯನ್ನು ಬಲಪಡಿಸಬಹುದು. ಹಸು, ಅದರ ಸೆಗಣಿ ಹಾಗೂ ಮೂತ್ರದ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು. ಮರದ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಚಿತಾಗಾರದಲ್ಲಿ ಗೋಕಾಷ್ಟವನ್ನು ಬಳಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಸಣ್ಣ ರೈತರು ಹಾಗೂ ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಲ್ಲದು ಎನ್ನುವ ಬಗ್ಗೆ ಪಶುವೈದ್ಯರು ಹಾಗೂ ತಜ್ಞರು ಫಲಿತಾಂಶದ ಆಧಾರಿತ ಕೆಲಸದಲ್ಲಿ ತೊಡಗಬೇಕು" ಎಂದಿದ್ದಾರೆ.