ಬೆಂಗಳೂರು, ನ.13 (DaijiworldNews/PY): "ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ದೇಶಾದ್ಯಂತ ಕಾಂಗ್ರೆಸ್ ಹಡಗು ಮುಳುಗಿ ಹೋಯ್ತು" ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ದೇಶಾದ್ಯಂತ ಕಾಂಗ್ರೆಸ್ ಹಡಗು ಮುಳುಗಿ ಹೋಯ್ತು. ಹಾಗಾದರೆ ಕಾಂಗ್ರೆಸ್ ಮುಕ್ತ ಭಾರತಕ್ಕೆ ರಾಹುಲ್ ಗಾಂಧಿಯೇ ಹೊಣೆ ಎಂದು ಹೇಳುವುದಕ್ಕೆ ಸಾಧ್ಯವೇ ಸುರ್ಜೇವಾಲಾ ಅವರೇ? ಸ್ವಲ್ಪವಾದರೂ ಸಾಮಾನ್ಯ ಜ್ಞಾನದ ಬುದ್ಧಿ ಉಪಯೋಗಿಸಿ" ಎಂದಿದೆ.
"ದೇಶವ್ಯಾಪಿ ನಡೆದ ಉಪಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಪಕ್ಷ ಈಗ ಬಿಟ್ಕಾಯಿನ್ ವಿಚಾರ ಹಿಡಿದುಕೊಂಡು ಉಸಿರಾಡುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಳ್ಳಿನ ಮೊರೆ ಹೋಗಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಸುಳ್ಳು ಪಸರಿಸಲು ಕಾಂಗ್ರೆಸ್ ಸೂಚನೆ ನೀಡಿದೆ" ಎಂದು ಹೇಳಿದೆ.
"ಶ್ರೀಕಿ ಬಂಧನವಾಗುವಾಗ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಈ ಕಾರಣಕ್ಕೆ ಅವರೇ ಪ್ರಕರಣದ ನೈತಿಕ ಹೊಣೆ ಹೊರಬೇಕೆಂಬುದು ಕಾಂಗ್ರೆಸ್ ವಾದ. ಹಾಗಾದರೆ ದೇಶ ವಿಭಜನೆಯಾಗುವಾಗ ಪ್ರಧಾನಿ ಹುದ್ದೆಯಲ್ಲಿದ್ದ ನೆಹರೂ ಆ ಪಾಪದ ನೈತಿಕ ಹೊಣೆ ಹೊರಬೇಕಲ್ಲವೇ?" ಎಂದು ಪ್ರಶ್ನಿಸಿದೆ.