ನವದೆಹಲಿ, ನ.13 (DaijiworldNews/HR): ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕೊರೊನಾ ಸಮಯದಲ್ಲಿ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳಲ್ಲಿ ಹಾಕಿದ್ದ ವಿಶೇಷ ಹಣೆಪಟ್ಟಿ ತೆಗೆದು ರೈಲು ಪ್ರಯಾಣಿಸಲಿದ್ದು, ದರ ಕೂಡ ಇನ್ನು ಮುಂದೆ ಕೊರೊನಾ ಮೊದಲಿನ ದರಗಳಿಗೆ ಇಳಿಕೆಯಾಗಲಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ.
-
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದ್ದು, ಎಲ್ಲಾ ರೈಲುಗಳ ಸಂಚಾರ ಆರಂಭಗೊಂಡಿದ್ದು, ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆ ಸ್ಥಗಿತಗೊಳಿಸಲಿದೆ.
ಇನ್ನು ವಿಶೇಷ ರೈಲುಗಳಲ್ಲಿ ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ ಶೇಕಡಾ 30 ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗಿದ್ದು, ಇದೀಗ ಈ ವಿಶೇಷ ಹಣೆಪಟ್ಟಿ ತೆಗೆಯುವುದರಿಂದ ಈ ರೈಲುಗಳ ಪ್ರಯಾಣಿಕರಿಗೂ ಸಾಮಾನ್ಯ ದರ ಜಾರಿಯಾಗಲಿದೆ ಎನ್ನಲಾಗಿದೆ.
ಕೊರೊನಾ ಮಾರ್ಗ ಸೂಚಿಯಂತೆ ರೈಲ್ವೆ ಇಲಾಖೆಯುವಿಶೇಷ ವಿಭಾಗಗಳಲ್ಲಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದ್ದು, ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. ಹೀಗಾಗಿ ದರ ಏರಿಕೆ ಮಾಡಿ ವಿಶೇಷ ಪರಿಸ್ಥಿತಿಗಳಲ್ಲಿ ರೈಲು ಓಡಿಸಲು ಇಲಾಖೆ ನಿರ್ಧರಿಸಿತ್ತು.