ಮೈಸೂರು, ನ.13 (DaijiworldNews/PY): "ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರ ಪಾತ್ರ ಇರುವ ಕುರಿತು ಕಾಂಗ್ರೆಸ್ ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ" ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಡಿ-ಐಟಿಯವರಿಗೆ ತನಿಖೆಯನ್ನು ಯಾವಾಗ ವಹಿಸಿದ್ದೀರಿ. ಬಿಜೆಪಿ ನಾಯಕರಿಗೂ ಹಾಗೂ ಪ್ರಸಿದ್ಧ ಶೆಟ್ಟಿ ಅವರಿಗೆ ಇರುವ ಸಂಬಂಧ ಏನು ಎನ್ನುವುದನ್ನು ತಿಳಿಸಬೇಕು. 15 ರಾಜ್ಯಗಳ ಬ್ಯಾಂಕ್ ಖಾತೆದಾರರ ಹಣ ಕದ್ದಿರುವ ಕುರಿತು ಮಾಹಿತಿ ನೀಡಬೇಕು" ಎಂದಿದ್ದಾರೆ.
"ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರು ಕೂಡಾ ಭಾಗಿಯಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಹಾಗಾಗಿ ಈ ಬಗ್ಗೆ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದ್ದಾರೆ.
"ಕಾಂಗ್ರೆಸ್ ವಿರುದ್ದ ಪ್ರತಿಯೊಂದಕ್ಕೂ ಆರೋಪ ಮಾಡುವುದನ್ನು ಮೊದಲು ಬಿಡಬೇಕು. ಬಿಟ್ ಕಾಯಿನ್ ದಂಧೆಯಲ್ಲಿ ಯಾರು ಇದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಈ ವಿಷಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಏಕೆ ಬಹಿರಂಗ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ತಿಳಿಸಬೇಕು" ಎಂದಿದ್ದಾರೆ.