ಬೆಂಗಳೂರು, ನ 13 (DaijiworldNews/MS): ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ - ಬಿಜೆಪಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಗೊಂಡಿದೆ. ಈ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರದ ವಿರುದ್ದ ಸರ್ಕಾರ ಹಗರಣವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕ , ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಏನು ಹೇಳಿದಂತಾಯ್ತು?ಈಗಾಗಲೇ ಸಾರ್ವಜನಿಕ ವಲಯದಲ್ಲಿರುವ ದಾಖಲೆಗಳನ್ನೇ ತಿರುಗಿಸಿ - ಮರುಗಿಸಿ ಸುಳ್ಳನ್ನೇ ಸತ್ಯವಾಗಿಸುವ ಪ್ರಯತ್ನ ನಡೆಸಿದ್ದಾರೆ.ನಿಮ್ಮ ಈ ಮ್ಯಾಜಿಕ್ ಶೋ ಜಾಸ್ತಿ ದಿನ ಓಡುವುದಿಲ್ಲ ಎಂದು ವ್ಯಂಗ್ಯವಾಡಿದೆ.
ಬಿಟ್ ಕಾಯಿನ್ ವಿಚಾರ ರಫೇಲ್ನಂತೆ ಕಾಂಗ್ರೆಸ್ ಸೃಷ್ಟಿಸಿದ ಒಂದು ಮರಿಚೀಕೆ. ಇಲ್ಲಿ ಆರಂಭಿಸುವವರೂ ಅವರೇ ಸಿಲುಕಿ ಬೀಳುವವರೂ ಅವರೇ. ಎಲ್ಲವೂ ನಡೆದಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸುಳ್ಳು ಪ್ರಚಾರದ ಮೂಲಕ ಬಿಜೆಪಿ ಮೇಲೆ ಆರೋಪಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.ಹು ಆರ್ ದಿ ಆ್ಯಕ್ಟರ್ ಎಂದು ಪ್ರಶ್ನಿಸಿರುವ ಸುರ್ಜೇವಾಲಾ ಅವರು ಯಾಕೋ ಅನ್ಯರ ಕೈ ಗೊಂಬೆಯಂತೆ ಅಭಿನಯಿಸುತ್ತಿದ್ದಾರೆ. ದಾಖಲೆ ಇಲ್ಲದ ಕಲ್ಪಿತ ವಿಚಾರಗಳಿಗೆ ಸತ್ಯದ ಮುಖವಾಡ ತೊಡಿಸುವ ವಿಫಲ ಪ್ರಯತ್ನವಿದು.Top secret, Bottom open ಎಂಬತಾಯ್ತು ಕಾಂಗ್ರೆಸ್ ಆರೋಪ ಎಂದು ಲೇವಡಿ ಮಾಡಿದೆ.
ಶ್ರೀಕಿ ಬಂಧನವಾಗುವಾಗ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಈ ಕಾರಣಕ್ಕೆ ಅವರೇ ಪ್ರಕರಣದ ನೈತಿಕ ಹೊಣೆ ಹೊರಬೇಕೆಂಬುದು ಕಾಂಗ್ರೆಸ್ ವಾದ. ಹಾಗಾದರೆ ದೇಶ ವಿಭಜನೆಯಾಗುವಾಗ ಪ್ರಧಾನಿ ಹುದ್ದೆಯಲ್ಲಿದ್ದ ನೆಹರೂ ಆ ಪಾಪದ ನೈತಿಕ ಹೊಣೆ ಹೊರಬೇಕಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.