ಯಾದಗಿರಿ, ನ 13 (DaijiworldNews/MS): ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಎರಡೂವರೆ ತಿಂಗಳ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿ ಸಂಭವಿಸಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೃತರನ್ನು ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡಾದ ಆಟೋ ಚಾಲಕ ಲಕ್ಷ್ಮಣ ಶಹಾಪುರ(26), ಹೋತಪೇಟ ತಾಂಡಾದ ನಿವಾಸಿ ಜಯರಾಜ್ ಚವ್ಹಾಣ್ (45) ಹಾಗೂ ಎರಡೂವರೆ ತಿಂಗಳ ಮಗು ಕೃಷ್ಣ ಸಂತೋಷ ಎಂದು ಗುರುತಿಸಲಾಗಿದೆ. ಇನ್ನು ಆಟೋದಲ್ಲಿ ಪ್ರಯಾಣಿಸುತ್ತಿದ್ದ 6 ಜನರ ಸ್ಥಿತಿ ಗಂಭೀರವಾಗಿದೆ.ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಮುಂಬೈನಿಂದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದವರನ್ನ ಪ್ಯಾಸೆಂಜರ್ ಆಟೋ ಚಾಲಕ ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡಾಗೆ ಕರೆದೊಯ್ಯುತ್ತಿದ್ದ. ಇದೇ ವೇಳೆ ಕಲಬುರಗಿಯಿಂದ ಯಾದಗಿರಿಯತ್ತ ಕ್ವಾರಿ ಕಲ್ಲು ತುಂಬಿದ್ದ ಲಾರಿ ಬರುತ್ತಿತ್ತು. ಮಾರ್ಗಮಧ್ಯೆ ಮುದ್ನಾಳ್ ಕ್ರಾಸ್ ಬಳಿ ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇಮೃತಪಟ್ಟಿದ್ದಾರೆ. ಯಾದಗಿರಿ ಸಂಚಾರಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.