ಬೆಂಗಳೂರು, ನ.13 (DaijiworldNews/HR): ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪೋಟೋ ಮುಂದೆ ಏಕ್ ಲವ್ಯಾ ಸಿನಿಮಾ ತಂಡದಿಂದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಶಾಂಪೇನ್ ಚಿಮ್ಮಿಸಿ, ಸಂಭ್ರಮಾಚರಣೆ ಮಾಡಿದ್ದಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಸಿನಿಮಾದ ನಟಿ ರಚಿತಾ ರಾಮ್ ಕ್ಷಮೆಯಾಚಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವಂತ ನಟಿ ರಚಿತಾ ರಾಮ್, ನಿನ್ನೆಯ ಏಕ್ ಲವ್ಯಾ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಇನ್ನು ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಅದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ. ಇಂತಿ ನಿಮ್ಮ ರಚಿತಾ ರಾಮ್ ಎಂಬುದಾಗಿ ತಿಳಿಸಿದ್ದಾರೆ.