ಲಕ್ನೋ, ನ.13 (DaijiworldNews/PY): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಾಜಿ ಸಾರಿಗೆ ಹಾಗೂ ಗಣಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿಗೆ ಲಕ್ನೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಜಾಪತಿಯೊಂದಿಗೆ ಇತರ ಇಬ್ಬರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಲಾಗಿದೆ.
ಪ್ರಜಾಪತಿ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಕ್ಯಾಬಿನೆಟ್ನ ಪ್ರಮುಖ ಸದಸ್ಯ, ಸಾರಿಗೆ ಹಾಗೂ ಗಣಿಗಾರಿಕೆ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದರು. ಚಿತ್ರಕೂಟ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಮಗಳ ಮೇಲೂ ಅತ್ಯಾಚಾರ ನಡೆಸಲು ಯತ್ನಿಸಿದ್ದರಿಂದ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರನ್ನು 2017ರಲ್ಲಿ ಬಂಧಿಸಲಾಗಿತ್ತು.
ಮಹಳೆಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರದ ಯತ್ನ ಮಾಡಿದ ಆರೋಪಗಳಡಿ ಅಪರಾಧಿಗಳೆಂದು ವಿಶೇಷ ನ್ಯಾಯಧೀಶ ಪಿ ಕೆ ರೈ ಆದೇಶ ಹೊರಡಿಸಿದ್ದಾರೆ. ಮಾಜಿ ಕಂದಾಯ ಗುಮಾಸ್ತನಾದ ಆಶಿಶ್ ಶುಕ್ಲ ಹಾಗೈ ಗುತ್ತಿಗೆದಾರನಾಗಿದ್ದ ಅಶೋಕ್ ತಿವಾರಿ ಇನ್ನಿಬ್ಬರು ಅಪರಾಧಿಗಳಾಗಿದ್ದು, ಮೂವರಿಗೂ ಕೂಡಾ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ನಾಲ್ವರನ್ನು ಸಾಕ್ಷ್ಯಗಳ ಅಭಾವವಿರುವ ಕಾರಣ ಖುಲಾಸೆಗೊಳಿಸಲಾಗಿದೆ.
ಮಾಜಿ ಸಚಿವ ಪ್ರಜಾಪತಿ ಹಾಗೂ ಆತನ ಸಹಚರರು ತನ್ನ ಮೇಲೆ ಅಕ್ಟೋಬರ್ 2014ರಿಂದ ಅತ್ಯಾಚಾರ ಎಸಗುತ್ತಿದ್ದಾರೆ. ತನ್ನ ಮಗಳಿಗೆ ಜುಲೈ 2016ರಲ್ಲಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರದ ಯತ್ನ ಮಾಡಿದ ಬಳಿಕ ಅವರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾಗಿ ದೂರುದಾರ ಮಹಿಳೆ ಹೇಳಿದ್ದರು. ಪೊಲೀಸರ ನಿಷ್ಕ್ರಿತೆಯ ವಿರುದ್ದ ಸಂತ್ರಸ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ನ ನಿರ್ದೇಶನದ ಮೇರೆಗೆ ಗೌತಮ್ಪಲ್ಲಿ ಪೊಲೀಸರು 2017ರ ಫೆಬ್ರವರಿ 18ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. 2017ರ ಮಾರ್ಚ್ ತಿಂಗಳಲ್ಲಿ ಮಾಜಿ ಸಚಿವ ಪ್ರಜಾಪತಿಯನ್ನು ಬಂಧಿಸಲಾಗಿತ್ತು.