ತಿರುವನಂತಪುರಂ, ನ.13 (DaijiworldNews/PY): ಕಲುಷಿತ ನೀರು, ಆಹಾರ ಹಾಗೂ ಪ್ರಾಣಿ ಮೂಲಕ ಹರಡುವ ನೋರೋವೈರಸ್ನ ಪ್ರಕರಣಗಳು ಕೇರಳದ ವಯನಾಡು ಜಿಲ್ಲೆಯಲ್ಲಿ ದೃಢಪಟ್ಟಿವೆ.
ಪ್ರಾಣಿಗಳ ಮೂಲದಿಂದ ಬರುವ ಈ ಕಾಯಿಲೆ ಬಗ್ಗೆ ಜನರು ಮುಂಜಾಗ್ರತೆ ವಹಿಸಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಈ ಸಂಬಂಧ ಅವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
"ನೋರೋವೈರಸ್ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ಈ ಕಾಯಿಲೆ ಬಗ್ಗೆ ಜಾಗೃತರಾಗಿರಬೇಕು. ವಯನಾಡು ಜಿಲ್ಲೆಯ ಮಂದಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಸೂಕ್ತ ಮುನ್ನೆಚ್ಚರಿಕೆ ಕ್ರಮ ಹಾಗೂ ಚಿಕಿತ್ಸೆಯಿಂದ ಈ ಕಾಯಿಲೆಯನ್ನು ಬೇಗನೇ ಗುಣಪಡಿಸಬಹುದು" ಎಂದು ತಿಳಿಸಿದ್ದಾರೆ.
ಶನಿವಾರ ವೀಣಾ ಜಾರ್ಜ್ ಅವರ ನೇತೃತ್ವದಲ್ಲಿ ಕೇರಳ ಆರೋಗ್ಯ ಇಲಾಖೆ ಸಭೆ ನಡೆದಿದ್ದು, ವಯನಾಡಿನ ಸ್ಥಿತಿಯನ್ನು ಪರಾಮರ್ಶೆ ನಡೆಸಿದೆ. ವಯನಾಡಿನ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ನೋರೋವೈರಸ್ ದೃಢಪಟ್ಟಿದೆ.
ನೋರೋವೈರಸ್ ಎನ್ನುವುದು ವೈರಸ್ಗಳ ಒಂದು ಗುಂಪಾಗಿದ್ದು, ಇದು ಜಠರಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಹೊಟ್ಟೆಯ ಭಾಗದಲ್ಲಿ ಹಾಗೂ ಕರುಳಿನಲ್ಲಿ ಉರಿಗೆ ಈ ವೈರಸ್ ಕಾರಣವಾಗುತ್ತದೆ. ವಾಂತಿ ಹಾಗೂ ಭೇದಿಗೆ ಕಾರಣವಾಗುತ್ತದೆ.
ಈ ವೈರಸ್ ಆರೋಗ್ಯವಂತ ಜನರಿಗೆ ಹೆಚ್ಚು ಬಾಧಿಸುವುದಿಲ್ಲ. ಆದರೆ, ಮಕ್ಕಳು ಹಾಗೂ ವಿವಿಧ ಕಾಯಿಲೆಗಳು ಇರುವವರನ್ನು ಈ ವೈರಸ್ ಆಕ್ರಮಣ ಮಾಡುತ್ತದೆ. ಪ್ರಾಣೀಗಳ ಮೂಲಕ ಹರಡುವ ವೈರಸ್, ಸೋಂಕಿತರ ಮನುಷ್ಯರ ನೇರ ಸಂಪರ್ಕದ ಮೂಲಕವೂ ಹರಡುತ್ತದೆ.
ಲಕ್ಷಣಗಳು:
ಹೊಟ್ಟೆ ನೋವು, ಬೇದಿ, ವಾಂತಿ, ವಾಕರಿಕೆ, ಜ್ವರ, ತಲೆ ನೋವು ಹಾಗೂ ಮೈ ಕೈ ನೋವು ಇದರ ಸಾಮಾನ್ಯ ಲಕ್ಷಣಗಾಗಿವೆ. ನಿರಂತರ ವಾಂತಿ ಹಾಗೂ ಭೇದಿ ನಿರ್ಜಲೀಕರಣ ಹಾಗೂ ಇತರೆ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ.
ಕೈಗೊಳ್ಳಬೇಕಾದ ಕ್ರಮಗಳು:
ಮಾರ್ಗಸೂಚಿಯ ಪ್ರಕಾರ, ನೋರೋವೈರಸ್ ಸೋಂಕಿತ ಜನರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ವೈದ್ಯರ ಸಲಹೆಯ ಮೇರೆಗೆ ಓಆರ್ಎಸ್ ಅನ್ನು ಕುಡಿಯಬೇಕು ಹಾಗೂ ಬಿಸಿ ನೀರು ಕುಡಿಯಬೇಕು. ಆಹಾರ ಸೇವನೆಗೂ ಮೊದಲು ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸೋಪು ಹಾಗೂ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಪ್ರಾಣಿಗಳೊಂದಿಗೆ ಒಡನಾಟ ಇರುವವರು ಹೆಚ್ಚು ಜಾಗರೂಕತೆ ವಹಿಸಬೇಕು. ಕುಡಿಯಲು ಕುದಿಸಿದ ನೀರನ್ನೇ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಹಳೆಯ ಹಾಗೂ ತೆರೆದಿಟ್ಟ ಆಹಾರಗಳ ಸೇವನೆಯನ್ನು ತಡೆಯಬೇಕು. ಸಮುದ್ರ ಮೀನು, ಏಡಿ, ಕಪ್ಪೆ ಚಿಪ್ಪು ಮುಂತಾದ ಚಿಪ್ಪಿನ ಪ್ರಾಣಿಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವಿಸಬೇಕು. ಹಣ್ಣು ಹಾಗೂ ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರ ಬಳಸಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.