ಮಧ್ಯಪ್ರದೇಶ, ನ.13 (DaijiworldNews/PY): ಕಲ್ಯಾಣ ಮಂಟಪದಲ್ಲಿ ವರನನ್ನು ನೋಡುತ್ತಿದ್ದಂತೆ ವಧು ವಿವಾಹ ನಿರಾಕರಿಸಿದ ಘಟನೆ ಮಧ್ಯಪ್ರದೇಶದ ರಾಯಗಢದಲ್ಲಿ ನಡೆದಿದೆ.
ಮಧ್ಯಪ್ರದೇಶದ ರಾಯಗಢ ಜಿಲ್ಲೆಯ ಸುಥಲಿಯಾದಲ್ಲಿ ನ.7ರಂದು ವಿವಾಹ ನಡೆಯುತ್ತಿತ್ತು. ಯುವತಿ ವಧುವಿನ ಡ್ರೆಸ್ ಧರಿಸಿ ಸಿದ್ದವಾಗಿದ್ದು. ವಿವಾಹ ಕಾರ್ಯಕ್ರಮಕ್ಕೆ ಅತಿಥಿಗಳು ಕೂಡಾ ಆಗಮಿಸುತ್ತಿದ್ದರು. ಈ ಸಂದರ್ಭ ವರ ಕಲ್ಯಾಣ ಮಂಟಪಕ್ಕೆ ಆಗಮನಿಸುತ್ತಿದ್ದಂತೆಯೇ ಇಡೀ ವಿವಾಹದ ಸಂಭ್ರಮ ಮಾಯವಾಗಿ ಹೋಯಿತು.
ವರ ಹಾಗೂ ಆತನ ಕುಟುಂಬಸ್ಥರು ಕಲ್ಯಾಣ ಮಂಟಪಕ್ಕೆ ಬರುವಾಗಲೇ ಮದ್ಯ ಸೇವನೆ ಮಾಡಿ ಬಂದಿದ್ದರು. ವರನ ಆಪ್ತ ಸ್ನೇಹಿತನೂ ಕೂಡಾ ಮದ್ಯ ಸೇವನೆ ಮಾಡಿದ್ದರು. ಮದ್ಯ ನಶೆಯಲ್ಲಿದ್ದ ವರನಿಗೆ ನಿಂತುಕೊಳ್ಳಲು ಆಗುತ್ತಿರಲಿಲ್ಲ ಎಂದು ವರದಿಯಾಗಿದೆ.
ವಧು ಮುಸ್ಕಾನ್ ಶೇಗ್ ಇದನ್ನೆಲ್ಲಾ ಮರೆಯಲ್ಲಿ ನಿಂತು ನೋಡುತ್ತಿದ್ದಳು. ಯುವಕನನ್ನು ಕಂಡು ಮುಸ್ಕಾನ್ ವಿವಾಹ ಆಗದಿರಲು ತೀರ್ಮಾನಿಸಿದ್ದಾಳೆ. ಈ ವಿಚಾರವನ್ನು ಮುಸ್ಕಾನ್ ತನ್ನ ಪೋಷಕರಿಗೆ ಹೇಳಿದ್ದು, ವಧುವಿನ ತೀರ್ಮಾನಕ್ಕೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ.
ವರ ಮದ್ಯ ಸೇವನೆ ಮಾಡಿದ್ದಾನೆ ಎನ್ನುವ ವಿಚಾರ ತಿಳಿದ ಬಳಿಕ ವಧು ನಿಖಾ ಸ್ಥಳಕ್ಕೆ ಬರಲು ನಿರಾಕರಿಸಿದ್ದಾಳೆ. ಬಳಿಕ ಕುಟುಂಬಸ್ಥರು ಹಾಗೂ ಧರ್ಮಗುರುಗಳ ಮುಂದೆ ಯುವಕ ಮದ್ಯ ವ್ಯಸನಿಯಾಗಿದ್ದು, ವಿವಾಹಕ್ಕೆ ಕಬೂಲ್ ಇಲ್ಲ ಅಂತ ಒತ್ತಿ ಹೇಳಿದ್ದಾಳೆ.
ಕೊನೆಗೆ ಮಧುವಿನ ಇಚ್ಛೆಯಂತೆ ವಿವಾಹ ರದ್ದುಗೊಳಿಸಲಾಗಿದೆ.