ಬೆಂಗಳೂರು, ನ.13 (DaijiworldNews/PY): "ವೀರಶೈವ ಲಿಂಗಾಯತ ವಿಭಜನೆಗೆ ಸಿದ್ದರಾಮಯ್ಯ ಅವರು ಎಂ ಬಿ ಪಾಟೀಲ್ ಅವರನ್ನು ದಾಳವಾಗಿ ಬಳಸಿಕೊಂಡರು, ಪರಿಣಾಮವಾಗಿ ಕಾಂಗ್ರೆಸ್ ಸರ್ವನಾಶವಾಯಿತು. ನಾನೂ ದಲಿತ ಎನ್ನುತ್ತಲೇ ದಲಿತ ನಾಯಕರನ್ನು ಹತ್ತಿಕ್ಕಿ, ದಲಿತರನ್ನೇ ಅವಮಾನ ಮಾಡಿದರು" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಬಿಜೆಪಿ, ವೀರಶೈವ ಲಿಂಗಾಯತ ವಿಭಜನೆಗೆ ಸಿದ್ದರಾಮಯ್ಯ ಅವರು ಎಂ ಬಿ ಪಾಟೀಲ್ ಅವರನ್ನು ದಾಳವಾಗಿ ಬಳಸಿಕೊಂಡರು, ಪರಿಣಾಮವಾಗಿ ಕಾಂಗ್ರೆಸ್ ಸರ್ವನಾಶವಾಯಿತು. ನಾನೂ ದಲಿತ ಎನ್ನುತ್ತಲೇ ದಲಿತ ನಾಯಕರನ್ನು ಹತ್ತಿಕ್ಕಿ, ದಲಿತರನ್ನೇ ಅವಮಾನ ಮಾಡಿದರು. ಸಿದ್ದರಾಮಯ್ಯರನ್ನು ಸಮರ್ಥಿಸಿಕೊಂಡು ನೀವು ಬಲಿಪಶುವಾಗಲು ಹೊರಟಿದ್ದೀರಾ ಪಾಟೀಲರೇ?" ಎಂದು ಪ್ರಶ್ನಿಸಿದೆ.
ಬಿಟ್ ಕಾಯಿನ್ ಹಗರಣದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ, ಮಾನ್ಯ ಡಿ ಕೆ ಶಿವಕುಮಾರ್ ಅವರೇ, "ಅಂದು ಕೇಂದ್ರೀಯ ತನಿಖಾ ಸಂಸ್ಥೆಗಳು ಅಕ್ರಮ ಆದಾಯ ಸಂಬಂಧಿತವಾಗಿ ನಿಮ್ಮ ಮೇಲೆ ದಾಳಿ ನಡೆಸಿದಾಗ ಈ ಲೋಕಜ್ಞಾನ ಎಲ್ಲಿ ಹೋಗಿತ್ತು? ಅಕ್ರಮಗಳ ಸರದಾರರಾದ ನೀವು ಬಿಟ್ಕಾಯಿನ್ ಹಗರಣದಲ್ಲೂ ಬೆಂಬಲಿಗರ ಮೂಲಕ ಪಾಲು ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಅನುಮಾನವಿದೆ, ನಿಜವೇ?" ಎಂದು ಕೇಳಿದೆ.
"ಸಿದ್ದರಾಮಯ್ಯ ಅವರು ದಲಿತ ಶಬ್ದ ಬಳಸಿಯೇ ಇಲ್ಲ ಎಂದು ವಾದಿಸುವ ಎಂ ಬಿ ಪಾಟೀಲ್ ಅವರೇ, ಇದು ನಿಮ್ಮ ನಾಯಕ ಸಿದ್ದರಾಮಯ್ಯನವರ ಭಾಷಣ, ಸರಿಯಾಗಿ ಕೇಳಿಸಿಕೊಳ್ಳಿ. ಇಲ್ಲಿ ದಲಿತ ನಾಯಕರ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು ಅರ್ಥವಾಗುತ್ತವೆ" ಎಂದಿದೆ.
"ದಲಿತ ನಾಯಕರ ವಿರುದ್ಧ ಸಿದ್ದರಾಮಯ್ಯ ಅವರು ಆಡಿರುವ ಮಾತುಗಳು ದಲಿತ ಸಮುದಾಯದ ಭಾವನೆಯನ್ನು ಕೆರಳಿಸಿದೆ. ಇದರಿಂದ ಬಚಾವ್ ಆಗುವುದಕ್ಕೆ ಸಿದ್ದರಾಮಯ್ಯ ಅವರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಎಂ.ಬಿ. ಪಾಟೀಲರೇ, ಎಷ್ಟು ದಿನ ಸಿದ್ದರಾಮಯ್ಯನವರಿಗೆ ರಾಜಕೀಯ ದಾಳವಾಗುತ್ತೀರಿ?" ಎಂದು ಪ್ರಶ್ನಿಸಿದೆ.