ಮಂಡ್ಯ, ನ.13 (DaijiworldNews/PY): "ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೆಸರು ಹೇಳಿದರೆ ಜನ ಮತ ಹಾಕುವುದಿಲ್ಲ" ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಹೆಚ್.ಡಿ ದೇವೇಗೌಡ ಅವರ ನೇತೃತ್ವದಲ್ಲಿ ಹಾಸನದಲ್ಲಿ ನಡೆದ ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.
"ಸೀಕ್ರೆಟ್ ಸಭೆ ಎಂದು ನಾನೊಬ್ಬನೇ ಬಂದಿದ್ದೇನೆ. ನನಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಈ ರೀತಿಯಾದ ಸಭೆ ಎಂದಿದ್ದರೆ ನಾನು ಬರುತ್ತಿರಲಿಲ್ಲ. ಅರಸೀಕೆರೆಯಲ್ಲಿ ನಮ್ಮವರನೆಲ್ಲಾ ಸೇರಿಸಿ ಸಭೆ ಮಾಡುತ್ತಿದ್ದೆ. ಈಗ ಈ ಸಭೆಗೂ ನಾನು ಅವರನ್ನು ಕರೆದಿಲ್ಲ ಎಂದು ಕಾರ್ಯಕರ್ತರು ಹಾಗೂ ಮುಖಂಡರು ಮುನಿಸಿಕೊಳ್ಳುತ್ತಾರೆ" ಎಂದಿದ್ದಾರೆ.
"ಜಿಲ್ಲೆಯ ಎಲ್ಲಾ ಕಡೆಯಿಂದ ಕಾರ್ಯಕರ್ತರು ಮುಖಂಡರು ಬಂದಿದ್ದಾರೆ. ನಮಗೂ ಹೇಳಿದ್ರೆ ನಾವು ಕರೆತರುತ್ತಿದ್ದೆವು. ನಾವು ಗೆದ್ದೇ ಗೆಲ್ಲುತ್ತೇವೆ. ನೀವು ಯಾರನ್ನೇ ನಿಲ್ಲಿಸಿದರೂ ನಮ್ಮ ಬೆಂಬಲ ಇದೆ. ಆದರೆ, ಸಭೆ ಕರೆದಾಗ ಯಾವ ರೀತಿಯಾದ ಸಭೆ ಎನ್ನುವುದನ್ನು ಹೇಳಿ. ಸೀಕ್ರೆಟ್ ಸಭೆ ಎಂದರೆ ಒಬ್ಬನೇ ಬರುತ್ತೇನೆ. ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರನ್ನು ಕರೆತರುತ್ತೇನೆ" ಎಂದು ಹೇಳಿದ್ದಾರೆ.
"ದೇವೇಗೌಡರು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲಿ ಅಥವಾ ಯಾರಿಗೆ ಟಿಕಟ್ ನೀಡಲಿ. ಇದಕ್ಕೆ ನಮ್ಮ ತಕರಾರಿಲ್ಲ. ಅವರು ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಮತ ಹಾಕಿಸುತ್ತೇನೆ" ಎಂದಿದ್ದಾರೆ.