ಬೆಂಗಳೂರು, ನ. 12 (DaijiworlNews/HR): ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ ಕಾಯಿನ್ ಪ್ರಕರಣದಲ್ಲಿ ಗಿತೋಪದೇಶ ಮಾಡಿರುವುದು ಆಶ್ಚರ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಆರೋಪದ ಬಗ್ಗೆ ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿ ಮೋದಿ, ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಯುತ್ತಿದ್ದು, ಬಸವರಾಜ ಬೊಮ್ಮಾಯಿಯವರು ಈಗಿನ ಮುಖ್ಯಮಂತ್ರಿಗಳು ಮಾತ್ರ ಅಲ್ಲ ಹಿಂದಿನ ಗೃಹಮಂತ್ರಿಯೂ ಹೌದು. ಪ್ರಧಾನ ಮಂತ್ರಿಗಳು ಆರೋಪವನ್ನು ನಿರ್ಲಕ್ಷಿಸಿ ಎಂದರೆ ತನಿಖೆ ಕೈಬಿಡಿ ಎಂದಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ, ಅವರೆಲ್ಲ ಯಾವ ಪಕ್ಷದವರು ಎನ್ನುವುದನ್ನು ಆ ಮೇಲೆ ನೋಡಿಕೊಳ್ಳೋಣ ಎಂದು ಆಗ್ರಹಿಸಿದ್ದಾರೆ.