ಮುಂಬೈ, ನ 12 (DaijiworldNews/MS): ಮಾಜಿ ಪತ್ನಿಯೂ ಆಕೆಯ ಜನ್ಮದಿನದಂದು ಭೇಟಿಗೆ ನಿರಾಕರಿಸಿದ್ದಾಳೆಂದು ಸಿಟ್ಟಿಗೆದ್ದ 25 ವರ್ಷದ ಯುವಕನೋರ್ವ ಆಕೆಯನ್ನು ಆಟೋದಿಂದ ಹೊರಕ್ಕೆಳೆದು ಹಾಡಹಗಲಿನಲ್ಲೇ ಆಕೆಗೆ ಚಾಕುವಿನಿಂದ ಇರಿದು ಕೊಂದ ಭೀಕರ ಘಟನೆ ಚೆಂಬೂರಿನಲ್ಲಿ ನಡೆದಿದೆ. ಘಟನೆ ಬಳಿಕ ಕೊಲೆ ಆರೋಪಿ, ಸರ್ಕಾರಿ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಅಕ್ಷಯ್ ಅಠವಳೆ ಎಂಬಾತನನ್ನು ಬಂಧಿಸಲಾಗಿದೆ.
ಚೆಂಬೂರಿನ ವಾಶಿ ನಾಕಾ ಕೊಳೆಗೇರಿಯ ನೆರೆಹೊರೆಯವರಾಗಿದ್ದಅಕ್ಷಯ್ ಅಠವಳೆ ಮತ್ತು ಕೊಲೆಯಾದ ಆಕಾಂಕ್ಷಾ ಖರತ್ಮೋಲ್ (22) ಪರಸ್ಪರ ಪ್ರೀತಿಸುತ್ತಿದ್ದು ೨೦೧೯ ರಲ್ಲಿ ವಿವಾಹವಾಗಿದ್ದರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಇವರ ದಾಂಪತ್ಯ ಜೀವನವು ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಆದರೆ ಆರೋಪಿಗೆ ತನ್ನ ಮಾಜಿ ಪತ್ನಿ ಯಾರೊಂದಿಗೋ ಪ್ರೇಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಕಾಡುತ್ತಿತ್ತು.
ಆಕೆಯ ಹುಟ್ಟುಹಬ್ಬವಾದ ನವೆಂಬರ್ 9 ರಂದು ಅಕ್ಷಯ್ ಮಾಜಿ ಪತ್ನಿ ಆಕಾಂಕ್ಷಾಗೆ ಆಕೆಯನ್ನು ಭೇಟಿಯಾಗಲು ಬಯಸಿ ಆಕೆಗೆ ಹಲವಾರು ಮೆಸೇಜ್ ಕಳುಹಿದ್ದಾನೆ. ಆದರೆ ಅವೆಲ್ಲವನ್ನೂ ಆಕೆ ನಿರ್ಲಕ್ಷಿಸಿದ್ದಾಳೆ. ಧಾರಾವಿ ನರ್ಸಿಂಗ್ ಹೋಂನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷಾಳನ್ನು ಉದ್ಯೋಗಕ್ಕೆ ತೆರಳುವ ವೇಳೆ ಆಕೆಯ ಆಟೋವನ್ನು ತನ್ನ ಬೈಕ್ನಲ್ಲಿ ರಾಹುಲ್ನಗರದವರೆಗೆ ಹಿಂಬಾಲಿಸಿ, ವಾಹನವನ್ನು ಹಿಂದಿಕ್ಕಿ ಆಕೆಯನ್ನು ಹೊರಗೆಳೆದು 6-7 ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ದಾರಿಹೋಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಾಳೆ. ಆರೋಪಿ ಅಕ್ಷಯ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 7 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.