ಹೈದರಾಬಾದ್, ನ. 12 (DaijiworlNews/HR): ಕೊರೊನಾದಿಂದ ಮೃತಪಟ್ಟವರ ನೆನಪಿಗಾಗಿ ತೆಲಂಗಾಣದ ರಾಜಣ್ಣ ಸಿರ್ಸಿಲಾ ಜಿಲ್ಲೆಯ ರಾಜಣ್ಣಪೇಟೆ ಹಳ್ಳಿಯಲ್ಲಿ ನಿರ್ಮಿಸಿರುವ ದೇಶದಲ್ಲಿಯೇ ಪ್ರಥಮ ಎನ್ನಲಾದ ಸ್ಮಾರಕ ಗುರುವಾರ ಅನಾವರಣಗೊಂಡಿದೆ.
2020–21ನೇ ಸಾಲಿನಲ್ಲಿ ದೇಶದಾದ್ಯಂತ ಕೋವಿಡ್ನಿಂದ ಮೃತಪಟ್ಟವರಿಗೆ ವೈದ್ಯರು ಮತ್ತು ವೃತ್ತಿಪರ ಸ್ವಯಂಸೇವಕರ ಸಮೂಹ ‘ಮದದ್’ ಹೆಸರಿನ ಯೋಜನೆಯಡಿ ಸ್ಮಾರಕವನ್ನು ನಿರ್ಮಿಸಿದ್ದು, ದೇಶದ ಮೊದಲ ಕೊರೊನಾ ಸಂತ್ರಸ್ತರ ಸ್ಮಾರಕ ಎಂದು ಇದನ್ನು ಗುರುತಿಸಲಾಗಿದೆ.
ಇನ್ನು ಕೊರೊನಾದಿಂದ ಕಳೆದುಕೊಂಡ ಆಪ್ತರನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ ಹಾಗೂ ಕೊರೊನಾ ಸೋಂಕು ತಗುಲದಂತೆ ಜಾಗ್ರತೆವಹಿಸುವುದನ್ನು ಮರೆಯಬಾರದೆಂಬುದು ಎಂಬುದು ಮದದ್ ಯೋಜನೆಯ ನಂಬಿಕೆಯಾಗಿದೆ ಎಂದು ಸ್ವಯಂ ಸೇವಕರ ಗುಂಪು ತಿಳಿಸಿದೆ.
ರಾಜಣ್ಣಪೇಟೆಯನ್ನು "ಕೋವಿಡ್-ನಿರೋಧಕವನ್ನು ಸಾಧಿಸಿದ ದೇಶದ ಮೊದಲ ಗ್ರಾಮ" ಮಾಡಲು ಸಹಾಯ ಮಾಡಿದ ಗ್ರಾಮೀಣ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಣ್ಣ-ಸಿರ್ಸಿಲಾ ಜಿಲ್ಲೆಯ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಡಿಎಂಎಚ್ಒ) ಸುಮನ್ ಮೋಹನ್ ರಾವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.