ನವದೆಹಲಿ, ನ.12 (DaijiworldNews/PY): "ದೇಶದಲ್ಲಿ ದ್ವೇಷದ ಮಾತು ಹಾಗೂ ವದಂತಿಗಳನ್ನು ನಿಯಂತ್ರಿಸಲು ಅಂತರಾಷ್ಟ್ರೀಯ ಕಾಯ್ದೆಗಳನ್ನು ಪರಿಶೀಲಿಸಿ ಸೂಕ್ತ ಪರಿಣಾಮಕಾರಿ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದ ಅರ್ಜಿಯನ್ನು ನ.22ರಂದು ವಿಚಾರಣೆ ನಡೆಸಲಾಗುವುದು" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ. ಎಂ ಖಾನ್ವಿಲ್ಕರ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ನ್ಯಾಯಪೀಠ, "ಈ ಬಗ್ಗೆ ಮನವಿ ಪ್ರತಿಯನ್ನು ಗೃಹ, ಕಾನೂನು, ನ್ಯಾಯಾಂಗ ಸಚಿವಾಲಯ ಹಾಗೂ ಕಾನೂನು ಆಯೋಗಕ್ಕೆ ಸಲ್ಲಿಸಬೇಕು" ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರಿಗೆ ಸೂಚಿಸಿದೆ.
ವಕೀಲ ಅಶ್ವನಿ ದುಬೆ ಅವರ ಮೂಲಕ, ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು. ದ್ವೇಷ ಭಾಷಣದ ಪಿಡುಗು ತಡೆಗೆ ಕಾನೂನಾತ್ಮಕವಾದ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕಾನೂನು ಆಯೋಗವು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
"ಇದಕ್ಕೆ ಸಂಬಂಧಿಸಿದಂತೆ ಬಂದ ಮತ್ತೊಂದು ಅರ್ಜಿಯನ್ನು ಅದೇ ದಿನ ವಿಚಾರಣೆಗೆ ಪರಿಗಣಿಸಲಾಗುವುದು" ಎಂದು ಹೇಳಿದೆ.