ಬೆಂಗಳೂರು, ನ. 12 (DaijiworlNews/HR): ಬಿಟ್ ಕಾಯಿನ್ ಪ್ರಕರಣ ಸಂಬಂಧಿಸಿದಂತೆ ಎಲ್ಲಾ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದಂತ ಅವರು, ಬಿಟ್ ಕಾಯಿನ್ ಪ್ರಕರಣವನ್ನು ಬಿಜೆಪಿ ಸರ್ಕಾರವು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಸಾಕಷ್ಟು ಮಾತನಾಡಿದ್ದು, ನಿನ್ನೆ ಕುಮಾರಸ್ವಾಮಿ ಅವರು ಕೂಡ ಹೇಳಿದ್ದಾರೆ. ಸರ್ಕಾರ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಅವರಿಗೆ ಅನುಕೂಲವಾಗುವ ಅಂಶಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದೆ" ಎಂದರು.
ಇನ್ನು "ಪ್ರಧಾನಮಂತ್ರಿಗಳಿಗೆ ಬರೆಯಲಾಗಿರುವ ಪತ್ರದ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ? ಅದು ನಿಜನಾ, ಸುಳ್ಳಾ? ಈ ಬಗ್ಗೆ ತನಿಖೆ ನಡೆಯುತ್ತಿದ್ದು ಅದು ಏನಾಗಿದೆ ಎಂದು ಹೇಳುತ್ತಿಲ್ಲ. ಬಿಟ್ ಕಾಯಿನ್ ವ್ಯವಹಾರ ನಡೆಸುವವರ ಬಗ್ಗೆ ಯಾವುದೇ ತಕರಾರಿಲ್ಲ. ಈ ಪ್ರಕರಣದಲ್ಲಿ ಹ್ಯಾಕಿಂಗ್ ನಡೆದಿದೆಯಾ ಇಲ್ಲವಾ? ಎಂಬುದಷ್ಟೇ ಮುಖ್ಯ" ಎಂದಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಏನಾಗಿದೆ ಎಂಬ ಸತ್ಯಾಂಶವನ್ನು ಸರ್ಕಾರ ಜನರ ಮುಂದೆ ಇಡಬೇಕು. ಸರ್ಕಾರಕ್ಕೇ ಈ ವಿಚಾರವಾಗಿ ಗೊಂದಲವಿದೆ ಎಂದು ಹೇಳಿದ್ದಾರೆ.