ನವದೆಹಲಿ, ನ.12 (DaijiworldNews/PY): 2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿಕೆ ನೀಡಿದ್ದ ನಟಿ ಕಂಗನಾ ರಣಾವತ್ ವಿರುದ್ದ ಬಿಜೆಪಿ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ನಡುವೆ ಕಳೆದ ಎರಡು ದಿನಗಳ ಹಿಂದೆ ಕಂಗನಾ ರಣಾವತ್ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದು, "ಮೊದಲು ಕಂಗನಾ ರಣಾವತ್ ಅವರಿಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು. ಈ ರೀತಿಯ ಪ್ರಶಸ್ತಿಗಳನ್ನು ನೀಡುವ ಮುನ್ನ ವ್ಯಕ್ತಿಗಳು ರಾಷ್ಟ್ರ ಹಾಗೂ ದೇಶದ ವೀರರನ್ನು ಅಪಮಾನಗೊಳಿಸುವವರಾ ಎಂದು ಅವರ ಮಾನಸಿಕತೆಯ ಮೌಲ್ಯಮಾಪನ ಮಾಡುವುದು ಅಗತ್ಯ" ಎಂದು ತಿಳಿಸಿದ್ದಾರೆ.
"ಈ ರೀತಿಯಾಗಿ ಹೇಳಿಕೆ ನೀಡುವ ನಟಿಯನ್ನು ಮಾಧ್ಯಮಗಳು ಬಹಿಷ್ಕರಿಸಬೇಕು" ಹಿಂದೂಸ್ತಾನಿ ಅವಾಮ್ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಝಿ ಕಿಡಿಕಾರಿದ್ದಾರೆ. ಇನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಕೂಡ ನಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಕೂಡಾ ಆಗ್ರಹಿಸಿದೆ.
"ಸ್ವಾತಂತ್ರ್ಯ ಹೋರಾಟಗಾರರನ್ನು ಕಂಗನಾ ಟೀಕಿಸಿದ್ದಾರೆ. ಕಂಗನಾ ಅವರಿಂದ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ವಾಪಾಸ್ಸು ಪಡೆದು ಅವರನ್ನು ಬಂಧಿಸಬೇಕು. ಅವರು ಈ ಹೇಳಿಕೆ ನೀಡುವ ಮುನ್ನ ಮಲಾನಾ ಕ್ರೀಮ್ ಅನರನು ತೆಗೆದುಕೊಂಡಿದ್ದಾರೆ ಎಂದೆನಿಸುತ್ತದೆ" ಎಂದು ಎನ್ಸಿಪಿ ನಾಯಕ ನಾವಬ್ ಮಲ್ಲಿಕ್ ಹೇಳಿದ್ದಾರೆ.
ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ಕಂಗನಾ ರಣಾವತ್, "2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ" ಎಂದಿದ್ದರು.
ಈ ಬಗ್ಗೆ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ವರುಣ್ ಗಾಂಧಿ, "ಕೆಲವರು ಮಹಾತ್ಮ ಗಾಂಧಿ ಅವರ ತ್ಯಾಗವನ್ನು ಅವಮಾನಿಸುತ್ತಿದ್ದಾರೆ. ಕೆಲವೊಮ್ಮೆ ಅವರ ಹಂತಕರನ್ನು ಗೌರವಿಸುತ್ತಾರೆ. ಮಂಗಲ್ ಪಾಂಡೆ, ರಾಣಿ ಲಕ್ಷ್ಮೀ ಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಭೋಸ್ ಹಾಗೂ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅಪಮಾನವಾಗಿದೆ. ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯಬೇಕೆ?" ಎಂದು ಕೇಳಿದ್ದರು.
ಇದಕ್ಕೆ ಇನ್ಸ್ಟಾಗ್ರಾಂ ಮೂಲಕ ನಟಿ ಉತ್ತರಿಸಿದ್ದು, "1857 ರ ಕ್ರಾಂತಿಯ ಮೊದಲ ಸ್ವಾತಂತ್ರ್ಯ ಹೋರಾಟವನ್ನು ನಾನು ಉಲ್ಲೇಖಿಸಿದ್ದೇನೆ. ಬ್ರಿಟಿಷರಿಂದ ಹೆಚ್ಚು ದೌರ್ಜನ್ಯಗಳು ಹಾಗೂ ಕ್ರೌರ್ಯಗಳಿಗೆ ಕಾರಣವಾಗಿತ್ತು. ಇದು ನಡೆದ ಸುಮಾರು ಒಂದು ಶತಮಾನದ ಬಳಿಕ ನಮಗೆ ಗಾಂಧಿಯವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನೀಡಲಾಯಿತು" ಎಂದು ಹೇಳಿದ್ದಾರೆ.