ಬೆಂಗಳೂರು, ನ.12 (DaijiworldNews/PY): "ಬಿಟ್ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು ವ್ಯವಸ್ಥಿತ ತಂತ್ರ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಕೇಂದ್ರ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ನಡೆಸುತ್ತಿವೆ.ಈ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿದೆ. ಹೀಗಿರುವಾಗ ಆರೋಪ ನಿರ್ಲಕ್ಷಿಸಿದರೆ ಹಗರಣ ಮುಚ್ಚಿ ಹಾಕುವ ಯತ್ನವಲ್ಲವೇ?" ಎಂದು ಕೇಳಿದ್ದಾರೆ.
"ಪ್ರಧಾನಿಯಾದವರು ಸರಿಯಾದ ತನಿಖೆ ನಡೆಸಿ ಆರೋಪಮುಕ್ತರಾಗಿ ಎಂಬ ಸಲಹೆ ನೀಡಬೇಕು. ನಿರ್ಲಕ್ಷಿಸಿ ಎಂದರೆ ಅರ್ಥವೇನು?" ಎಂದು ಪ್ರಶ್ನಿಸಿದ್ಧಾರೆ.
"ಬಿಟ್ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು ವ್ಯವಸ್ಥಿತ ತಂತ್ರ. ಈ ಹಗರಣ ಈಗಾಗಲೇ ದೇಶಾದ್ಯಾಂತ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನಾಯಕರು ಪಾರದರ್ಶಕ ತನಿಖೆ ನಡೆಸಲು ಬೊಮ್ಮಾಯಿಯವರಿಗೆ ಆಗ್ರಹಿಸಬೇಕು. ಅದರ ಬದಲು ನಿರ್ಲಕ್ಷಿಸಿ ಎಂದು ಸಲಹೆ ಕೊಟ್ಟರೆ ತನಿಖೆ ಹಳ್ಳ ಹಿಡಿಯುವುದಂತೆ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಲಿ" ಎಂದು ಆಗ್ರಹಿಸಿದ್ದಾರೆ.