ನವದೆಹಲಿ, ನ.12 (DaijiworldNews/PY): ಪಶ್ಚಿಮ ಬಂಗಾಳದ ಕೂಚ್ಬೆಹಾರ್ ಬಳಿ ಅಂತರಾಷ್ಟ್ರೀಯ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ತಡೆಗೆ ಬಿಎಸ್ಎಫ್ ಸಿಬ್ಬಂದಿ ಶುಕ್ರವಾರ ಗುಂಡಿನ ದಾಳಿ ನಡೆಸಿದ ಪರಿಣಾಮ ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದು, "ಗುಂಡಿನ ದಾಳಿಯ ಸಂದರ್ಭ ಭದ್ರತಾ ಪಡೆಯ ಯೋಧರೋರ್ವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ" ಎಂದಿದ್ದಾರೆ.
"ಮುಂಜಾನೆ 3 ಗಂಟೆಯ ಸುಮಾರಿಗೆ ಕಿಡಿಗೇಡಿಗಳು ಭಾರತದ ಗಡಿದಾಟಿ ಜಾನುವಾರುಗಳ ಕಳ್ಳಸಾಗಣೆಗೆ ಯತ್ನಿಸಿದ್ದರು. ಈ ವೇಳೆ ವಾಪಾಸ್ಸು ಮರಳುವಂತೆ ಸೂಚಿಸಿದ್ದು, ಅದಕ್ಕೆ ಸ್ಪಂದಿಸಲಿಲ್ಲ. ಆದರೆ, ಅವರು ಕಬ್ಬಿಣದ ಸರಳು ಬಳಸಿ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಭದ್ರತಾ ಪಡೆ ಸಿಬ್ಬಂದಿಯು ಗುಂಡಿನ ದಾಳಿ ನಡೆಸಿದ್ದಾರೆ" ಎಂದು ತಿಳಿಸಿದ್ದಾರೆ.
"ಬಳಿಕ ಸಿಬ್ಬಂದಿ ಅಂತರಾಷ್ಟ್ರೀಯ ಗಡಿಗೆ ಅನುಗುಣವಾಗಿ ಹಾಕಿದ್ದ ಬೇಲಿಯ ಸಮೀಪ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಇಬ್ಬರು ಪರಿಚಿತ ಕಿಡಿಗೇಡಿಗಳ ಶವ ಪತ್ತೆಯಾಗಿದೆ" ಎಂದಿದ್ದಾರೆ.