ಬೆಂಗಳೂರು, ನ12 (DaijiworldNews/MS): ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಬಿಜೆಪಿ ವಿರುದ್ದ ಕಿಡಿಕಾರಿರುವ ವಿಪಕ್ಷ ನಾಯಕ, ಬಿಟ್ ಕಾಯಿನ್ ಅರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿ ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕೈ ನಾಯಕ , ಆರೋಪದ ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿ ಮೋದಿ ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ?ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ,ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಮಂತ್ರಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರ/ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಯುತ್ತಿದೆ. ಬೊಮ್ಮಯಿಯವರು ಈಗಿನ ಮುಖ್ಯಮಂತ್ರಿಗಳು ಮಾತ್ರ ಅಲ್ಲ ಹಿಂದಿನ ಗೃಹಮಂತ್ರಿಗಳು ಹೌದು. ಈ ಹಂತದಲ್ಲಿ ಪ್ರಧಾನಿ ಮೋದಿ ಆರೋಪವನ್ನು ನಿರ್ಲಕ್ಷಿಸಿ ಎಂದರೆ ತನಿಖೆಯನ್ನು ಕೈಬಿಡಿ ಎಂದಾಗುವುದಿಲ್ಲವೇ ಬಿಟ್ ಕಾಯಿನ್ ಹಗರಣದಲ್ಲಿ
ಬಿ.ಎಸ್ ಬೊಮ್ಮಾಯಿ ಭಾಗಿಯೋ ಇಲ್ಲವೋ ನಮಗೆ ಗೊತ್ತಿಲ್ಲ, ಅವರು ಅಪರಾಧಿಗಳೆಂದು ಯಾರೂ ಹೇಳಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಿ ಎಂದಷ್ಠೇ ನಾನು ಮತ್ತು ನಮ್ಮ ಪಕ್ಷದ ನಾಯಕರು ಹೇಳುತ್ತಿರುವುದು ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ನಾಯಕರ ಹೆಸರು ಇದೆ ಎಂದು ಹೇಳಿ ನಮ್ಮ ಬಾಯಿಮುಚ್ಚಿಸಲು ಪ್ರಯತ್ನ ಮಾಡಬೇಡಿ.ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ,ಅವರೆಲ್ಲ ಯಾವ ಪಕ್ಷದವರು ಎನ್ನುವುದನ್ನು ಆ ಮೇಲೆ ನೋಡಿಕೊಳ್ಳೋಣ ಎಂದು ಹೇಳಿದ್ದಾರೆ.