ವಿಜಯಪುರ, ನ.12 (DaijiworldNews/PY): "ಸದ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅವರು ದಲಿತ ಸಮುದಾಯದ ವ್ಯಕ್ತಿಯನ್ನು ಸಿಎಂ ಮಾಡಿ ತೋರಿಸಲಿ . ಈ ಕುರಿತು ಕಾಂಗ್ರೆಸ್ ಅಧಿಕಾರ ಬಂದಾಗ ಚರ್ಚಿಸುತ್ತೇವೆ" ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಲಿತ ಸಿಎಂ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ನಮ್ಮ ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಈಗ ನಾವು ಅಧಿಕಾರದಲ್ಲಿ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಬಗ್ಗೆ ಚರ್ಚೆ ಇಲ್ಲ" ಎಂದಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿ, ಬದ್ಧತೆ ಇದೆ. ಅವರು ದಲಿತರ ವಿರುದ್ದ ಮಾತನಾಡಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯರಿಗೆ ದಲಿತರ ಬಗ್ಗೆ ಇರುವಷ್ಟು ಕಾಳಜಿ ಬೇರೆ ಯಾರಿಗೂ ಇಲ್ಲ. ಸಿದ್ದರಾಮಯ್ಯ ಅವರು ವಿಶೇಷ ಘಟಕ ಯೋಜನೆಯಲ್ಲಿ ದೇಶದಲ್ಲೇ ಮೊದಲು ಶೇ.24ರಷ್ಟಿದ್ದ ಬಜೆಟ್ನಲ್ಲಿ 4 ಸಾವಿರ ರೂ. ಇದ್ದುದ್ದನ್ನು 25 ಸಾವಿರ ರೂ.ವರೆಗೆ ಅನುದಾನ ಮೀಸಲು ಇರಿಸಿದ್ದಾರೆ. ಅನುದಾನ ಬಳಕೆ ವಿಚಾರದಲ್ಲಿ ಕಾನೂನು ಬದ್ಧತೆಯನ್ನು ಕಲ್ಪಿಸಿರುವ ಸಿದ್ದರಾಮಯ್ಯ ಅವರ ದಲಿತ ಪರ ಕಾಳಜಿಯನ್ನು ಯಾರೂ ಕೂಡಾ ಪ್ರಶ್ನಿಸುವಂತಿಲ್ಲ" ಎಂದು ಹೇಳಿದ್ದಾರೆ.
ಸಿಂದಗಿ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಎಲ್ಲರೂ ಮತದಾರರು ನೀಡುವ ತೀರ್ಪಿಗೆ ತಲೆಬಾಗಲೇಬೇಕು. ನಾವು ಕೂಡಾ ತೆ ಬಗ್ಗಿಸಿ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಸಚಿವರನ್ನು ಮುಂದಿಟ್ಟುಕೊಂಡು ಅಲ್ಲಿನ ಸರ್ಕಾರ ಹಣ ನೀಡಿ ಚುನಾವಣೆ ಗೆದ್ದಿದ್ದಾರೆ" ಎಂದಿದ್ದಾರೆ.
"ನ.14ರಂದು ಪಕ್ಷದ ವರಿಷ್ಠರು ವಿಭಾಗವಾರು ಸಭೆ ಕರೆದಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ವಿರೋಧ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅದ್ಯಕ್ಷರ ನೇತೃತ್ವದ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚೆ ಆಗಲಿದೆ. ಪಕ್ಷ ಹಾಗೂ ಜನಪ್ರತಿನಿಧಿಗಳ ನಿರ್ಣಯಯದ ಅನ್ವಯ ಹೈ ಕಮಾಂಡ್ ಅಭ್ಯರ್ಥಿಯ ಆಯ್ಕೆಯ ತೀರ್ಮಾನವಾಗಲಿದೆ" ಎಂದು ತಿಳಿಸಿದ್ದಾರೆ.