ಮೊರಾದಾಬಾದ್, ನ.12 (DaijiworldNews/PY): ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಮಂತ್ರಿಯನ್ನಾಗಿ ಮಾಡಿದ್ದರೆ ದೇಶ ಇಬ್ಭಾಗವಾಗುತ್ತಿರಲಿಲ್ಲ ಎಂದು ಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ ಮುಖ್ಯಸ್ಥ ಒಪಿ ರಾಜ್ ಭರ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, "ಕಾಂಗ್ರೆಸ್ ಹಾಗೂ ಅಂದಿನ ನಾಯಕರು ದೇಶ ಇಬ್ಭಾಗವಾಗಲು ಕಾರಣ" ಎಂದಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಇತಿಹಾಸವನ್ನು ಓದದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾಧಿ ಪಕ್ಷಕ್ಕೆ ನಾನು ಸವಾಲೆಸೆಯುತ್ತಿದ್ದೇನೆ. ದೇಶ ವಿಭಜನೆ ಮುಸ್ಲಿಮರಿಂದಾಗಿಲ್ಲ. ಜಿನ್ನಾ ಕಾರಣದಿಂದ ವಿಭಜನೆಯಾಯಿತು. ಆ ವೇಳೆ ಮುಸ್ಲಿಮರು ಪ್ರಭಾವಶಾಲಿಯಾದ ನವಾಬ್ ಅಥವಾ ಪದವೀದರ ಅಭ್ಯರ್ಥಿಗಳಿಗೆ ಮಾತ್ರವೇ ಮತ ಚಲಾಯಿಸುತ್ತಿದ್ದರು. ಆ ಪರಿಣಾಮದಿಂದ ದೇಶ ಇಬ್ಭಾಗವಾಗಲು ಕಾಂಗ್ರೆಸ್ ಹಾಗೂ ಅಂದಿನ ನಾಯಕರೇ ಕಾರಣ" ಎಂದು ದೂರಿದ್ದಾರೆ.
ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಎಸ್ಬಿಎಸ್ಪಿ ಮೈತ್ರಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ವಾಕ್ಸಮರ ಮುಂದುವರಿಯುವುದಾಗಿ ವರದಿ ಹೇಳಿದೆ.