ಬೆಂಗಳೂರು, ನ.12 (DaijiworldNews/PY): "ಬಿಟ್ ಕಾಯಿನ್ ದಂಧೆ ಪ್ರಕರಣದ ಆರೋಪಿ ಶ್ರೀಕೃಷ್ಣನಿಗೆ ಹೇಗೆ ಜಾಮೀನು ಸಿಕ್ಕಿದ್ದು?. ಆರೋಪಿಯ ಜಾಮೀನಿಗೆ ಖಾತರಿ ನೀಡಿದವರು ಹಾಗೂ ಆತನ ಪರ ವಾದ ಮಂಡಿಸಿದ ವಕೀಲ ಯಾರು?" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೈಲಿನಿಂದ ಹೊರಬಂದ ಆರೋಪಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾನೆ. ಬಳಿಕ ಆಟೋ ಹತ್ತಿ ಹೋಗುತ್ತಾದೆ. ಇವೆಲ್ಲವನ್ನು ನೋಡಿದರೆ ಈ ಪ್ರಕರಣದ ಹಿಂದೆ ಯಾರೋ ಇದ್ದಾರೆ ಎನ್ನುವುದು ಸ್ಪಷ್ಟ" ಎಂದಿದ್ದಾರೆ.
"ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನ ಹೆಚ್ಚಾಗಿದೆ. ಯಾವ ರೀತಿಯಾಗಿ ಸರ್ಕಾರದ ಪರ ವಕೀಲರು ನ್ಯಾಯ ಮಂಡಿಸಿದ್ದಾರೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾಕ್ಕೆ ಭೇಟಿ ನೀಡಿದ್ದಾಗ ಈ ಪಕ್ರಕರಣ ಕುರಿತು ಮಾಹಿತಿ ಸಿಕ್ಕಿದೆ. ಇದರಿಂದ ಮುಜುಗರವಾದ ಕಾರಣ ಅವರು ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಈ ಕಾರಣದಿಂದ ದೇಶದ ಮಾನ ಹರಾಜಾಗಬಾರದು ಎನ್ನುವ ನಿಟ್ಟಿನಲ್ಲಿ ಒಂದಿಷ್ಟು ಜನರ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿರುವ ಸಾಧ್ಯತೆ ಇದೆ. ಈ ವಿಚಾರ ಆದಷ್ಟು ಬೇಗ ಜನರಿಗೆ ತಿಳಿಯಲಿ" ಎಂದಿದ್ದಾರೆ.
"ರಾಜಕಾರಣಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಮಾತೂ ಇದೆ. ಪದೇ ಪದೇ ಈ ರೀತಿ ನಡೆದರೆ ಜನರು ಯಾರನ್ನು ನಂಬಬೇಕು?. ಒಬ್ಬರಿಂದ ಜನರು ಎಲ್ಲಾ ರಾಜಕಾರಣಿಗಳ ಕಡೆಗೆ ಕೈ ತೋರಿಸುವಂತಾಗಿದೆ" ಎಂದು ಹೇಳಿದ್ದಾರೆ.
ರಾಜ್ಯದ ಇಂಟರ್ಪೋಲ್ ಸಮನ್ವಯ ಅಧಿಕಾರಿಯಾಗಿರುವ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಎಪ್ರಿಲ್ 28ರಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರ ಬರೆದಿದ್ದು, ಶ್ರೀಕೃಷ್ಣ ಪಾಲ್ಗೊಂಡಿರುವ ಬಿಟ್ ಕಾಯಿನ್ ದಂಧೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿಕೊಂಡಿರುವ ಕಾರಣ ಇಂಟರ್ಪೋಲ್ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು.
ಮಾರ್ಚ್ 3ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ತನಿಖಾ ವರದಿ, ಮಹಜರು ದಾಖಲೆಗಳನ್ನು ಸಲ್ಲಿಸಲಾಗಿತ್ತು. ಫೆ.15ರಂದು ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರು ಬರೆದಿದ್ದ ಪತ್ರವನ್ನು ಆಧರಿಸಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಈ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಈಗ ಎರಡೂ ದಾಖಲೆಗಳು ಬಹಿರಂಗವಾಗಿದೆ.