ಬೆಂಗಳೂರು, ನ. 11 (DaijiworldNews/SM): ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಡಿಗಲ್ಲು ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಹಾಗೂ ಉನ್ನತೀಕರಿಸಿದ ಐಟಿಐಗಳ ಉದ್ಘಾಟನೆ ನಡೆಸಲಿದ್ದಾರೆ. ಅಲ್ಲದೆ ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಆಹ್ವಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಮ್ಮತಿ ಸೂಚಿಸಿದ್ದಾರೆ. ಆದರೆ, ದಿನಾಂಕ ಮಾತ್ರ ಅಂತಿಮಗೊಳಿಸಿಲ್ಲ.