ಬೆಂಗಳೂರು, ನ.11 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೊದಲು ತಮ್ಮ ಗೋಮುಖ ವ್ಯಾಘ್ರನ ಕೆಲಸ ನಿಲ್ಲಿಸಲಿ" ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು 2016-18ರವರೆಗೆ ಸಿಎಂ ಆಗಿದ್ಧಾಗಲೇ ಬಿಟ್ ಕಾಯಿನ್ ವಿಚಾರದ ಚರ್ಚೆ ನಡೆಯುತ್ತಿತ್ತು. ಆದರೆ, ಯಾರಿಗೂ ನಗದು ಎಲ್ಲಿದೆ ಖಾತೆ ಎಲ್ಲಿದೆ ಎಂದು ತಿಳಿದಿಲ್ಲ. ಆಗ ಐಟಿ, ಬಿಟಿ ಸಚಿವರಾಗಿದ್ದವರನ್ನು ಈಗ ವಿಚಾರಣೆ ಪಡಿಸಿದ್ದಲ್ಲಿ ನಿಮ್ಮ ಗುಟ್ಟು ರಟ್ಟಾಗಲಿದೆ" ಎಂದಿದ್ದಾರೆ.
"ಸಿದ್ದರಾಮಯ್ಯ ಸುಳ್ಳುಗಳ ಸರದಾರ. ಬರಿಯ ಗಾಳಿಯಲ್ಲಿ ಗುಂಡು ಹೊಡೆಯುವ ವ್ಯಕ್ತಿ ಅವರು" ಎಂದು ಹೇಳಿದ್ಧಾರೆ.
"ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಹೋಗುತ್ತಾರೆ ಎನ್ನುವ ಹೇಳಿಕೆಯ ವಿಡಿಯೋವನ್ನು ತಿರುಚಿಲ್ಲಿ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರ ನಾಲಿಗೆ ತಿರುಚಿದೆ. ನಿಜವಾದ ವಿಡಿಯೋ ಇದ್ದರೆ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಲಿ" ಎಂದು ಸವಾಲು ಹಾಕಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬದಲಾವಣೆ ಆಗುತ್ತದೆ. ಮೂರನೇ ಸಿಎಂ ಬರುತ್ತಾರೆ ಎನ್ನುವುದು ಸುಳ್ಳು. ದಲಿತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಿಜ ಮುಖ ಬಯಲಾಗಿದೆ. ನಾನೂ ದಲಿತನೇ, ನಾನು ಮುಸ್ಲಿಂ ಎನ್ನುವ ಮೂಲಕ ಸಿದ್ದರಾಮಯ್ಯ ಅವರ ನಿಜಬಣ್ಣ ಹೊರಬಿದ್ದಿದೆ" ಎಂದಿದ್ದಾರೆ.