ನವದೆಹಲಿ, ನ.11 (DaijiworldNews/PY): "ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಜನರು ದೆಹಲಿ ಮಾದರಿಯ ಸರ್ಕಾರವನ್ನು ಬಯಸುತ್ತಾರೆ. ಜನರು ಖಂಡಿತವಾಗಿ ಮತ ಹಾಕುತ್ತಾರೆ" ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಗೋವಾ, ಉತ್ತರಾಖಂಡ ಹಾಗೂ ಉತ್ತರಪ್ರದೇಶದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಜನರು ದೆಹಲಿ ಮಾದರಿಯ ಅಡಳಿತಕ್ಕೆ ಖಂಡಿತವಾಗಿ ಮತ ಹಾಕುತ್ತಾರೆ" ಎಂದಿದ್ದಾರೆ.
"ಗೋವಾ ಹಾಗೂ ಪಂಜಾಬ್ನಲ್ಲಿ ಜನರು ದೆಹಲಿ ಮಾದರಿಯನ್ನು ಮೆಚ್ಚಿ ಮತ ಹಾಕಲಿದ್ದಾರೆ. ಜನರು ಪಂಜಾಬ್ ಕಾಂಗ್ರೆಸ್ನ ಒಳಜಗಳವನ್ನು ನೋಡಿ ತೀರ್ಮಾನ ಕೈಗೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
"ನಾನು ದೇಶದ 130 ಕೋಟಿ ಜನರನ್ನು ಐಕ್ಯವಾಗಿರಿಸಲು ಬಯಸುತ್ತೇನೆ. ನಿಜವಾದ ಹಿಂದುತ್ವ ಅಂದರೆ ಇದು. ಜನರನ್ನು ಧರ್ಮದ ಆಧಾರದಲ್ಲಿ ವಿಂಗಡಣೆ ಮಾಡುವುದು ಗಲಭೆಗಳನ್ನು ಸೃಷ್ಟಿ ಮಾಡುವುದು, ದಲಿತರ ವಿರುದ್ದ ದೌರ್ಜನ್ಯವನ್ನು ಎಸಗುವುದು ನಿಜವಾದ ಹಿಂದುತ್ವವಲ್ಲ. ಜನರು ಪರಸ್ಪರ ಏಕತೆಯಿಂದ ಇರುವುದೇ ನಿಜವಾದ ಹಿಂದುತ್ವ" ಎಂದು ಹೇಳಿದ್ದಾರೆ.
"ದೇಶದಲ್ಲಿ ಪ್ರಸ್ತುತ ಹಿಂದುತ್ವದ ಹೆಸರಿನಲ್ಲಿ ಏನು ನಡೆಯುತ್ತಿದೆಯೋ ಅದು ಹಿಂದುತ್ವವಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಜನರು ಕೆಟ್ಟ ಭಾಷೆಯಲ್ಲಿ ನಿಂದನೆ ಮಾಡುತ್ತಾರೆ. ಇದು ನಿಜವಾದ ಹಿಂದುತ್ವ ಅಲ್ಲ" ಎಂದಿದ್ದಾರೆ.
"ನನಗೆ ದೇಶದ 130 ಕೋಟಿ ಜನರಲ್ಲಿ ಐಕ್ಯರಾಗಬೇಕು. ಜನರ ಮಧ್ಯೆ ಪರಸ್ಪರ ಐಕ್ಯತೆ ಬೇಕು. ಇದು ಹಿಂದುತ್ವ. ಹಿಂದುತ್ವವೇ ಏಕತೆ. ಯಾರನ್ನೂ ಕೂಡಾ ಹಿಂದುತ್ವ ವಿಭಜನೆ ಮಾಡಲಾರದು. ನನಗೆ ಮೃದು ಹಿಂದುತ್ವ ಬೇಡ" ಎಂದು ಹೇಳಿದ್ಧಾರೆ.